ಸಾರಾಂಶ
ಬಂಡೀಪುರ ಹುಲಿ ರಕ್ಷಿತಾರಣ್ಯದ ಮೂಲಕ ಕೇರಳಕ್ಕೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ 15 ವರ್ಷಗಳಿಂದ ಜಾರಿಯಲ್ಲಿರುವ ರಾತ್ರಿ ಸಂಚಾರ ನಿಷೇಧದಿಂದಾಗುತ್ತಿರುವ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಇದೀಗ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.
ನವದೆಹಲಿ: ಬಂಡೀಪುರ ಹುಲಿ ರಕ್ಷಿತಾರಣ್ಯದ ಮೂಲಕ ಕೇರಳಕ್ಕೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ 15 ವರ್ಷಗಳಿಂದ ಜಾರಿಯಲ್ಲಿರುವ ರಾತ್ರಿ ಸಂಚಾರ ನಿಷೇಧದಿಂದಾಗುತ್ತಿರುವ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಇದೀಗ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ವನ್ಯಜೀವಿಗಳಿಗೂ ಸಮಸ್ಯೆಯಾಗದಂತೆ ಹಾಗೂ ರಾತ್ರಿ ವೇಳೆಯೂ ವಾಹನ ಸಂಚಾರಕ್ಕೆ ಅವಕಾಶ ಸಿಗುವಂತೆ ಅರಣ್ಯ ಪ್ರದೇಶದಲ್ಲಿ ಆರು ಪಥಗಳ ಸುರಂಗ ಮಾರ್ಗ ನಿರ್ಮಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಮಲಯಾಳಿ ಮಾಧ್ಯಮವೊಂದು ವರದಿ ಮಾಡಿದೆ.
ಕೇರಳದ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಸ್ ಅವರು ಬಂಡೀಪುರ ರಸ್ತೆ ಸಮಸ್ಯೆಯ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಬುಧವಾರ ಭೇಟಿಯಾಗಿದ್ದರು. ಈ ವೇಳೆ ಗಡ್ಕರಿ ಅವರು ಸುರಂಗ ಮಾರ್ಗದ ವಿಚಾರ ಪ್ರಸ್ತಾಪಿಸಿದ್ದಾರೆ.
ಈ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸುರಂಗ ಮಾರ್ಗ ರೂಪಿಸುವ ಸಂಬಂಧ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.
ಈ ಹಿಂದೆ ಬಂಡೀಪುರ ರಸ್ತೆಯಲ್ಲಿ ಎಲಿವೇಟೆಡ್ ರಸ್ತೆ ನಿರ್ಮಿಸುವ ಪ್ರಸ್ತಾಪವಿತ್ತಾದರೂ ಅದು ಕಾರ್ಯಸಾಧುವಲ್ಲ ಎನ್ನುವ ಕಾರಣಕ್ಕೆ ಆ ಯೋಜನೆಯನ್ನು ಕೈಬಿಡಲಾಗಿದೆ. ಹೀಗಾಗಿ ವನ್ಯಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ಸುರಂಗ ಮಾರ್ಗ ನಿರ್ಮಿಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಬಂದಿದೆ.
ಒಂದು ವೇಳೆ ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಕೇರಳದ ವಯನಾಡು, ಮೈಸೂರು ಮತ್ತು ಬೆಂಗಳೂರು ನಡುವಿನ ಸಂಚಾರ ಇನ್ನಷ್ಟು ಸುಗಮವಾಗುವುದಲ್ಲದೆ, ಬಂಡೀಪುರ ಹೆದ್ದಾರಿಯಲ್ಲಿ ಜಾರಿಯಲ್ಲಿರುವ ಒಂದೂವರೆ ದಶಕದಷ್ಟು ಹಳೆಯ ರಾತ್ರಿ ಸಂಚಾರ ನಿಷೇಧದ ಸಮಸ್ಯೆಗೆ ಮುಕ್ತಿ ಸಿಗಲಿದೆ.
25 ಕಿ.ಮೀ. ಸುರಂಗ:
ಸದ್ಯ ರಾತ್ರಿ ಸಂಚಾರ ನಿರ್ಬಂಧ ಬಂಡೀಪುರ ಮೂಲಕ ಸಾಗುವ ಎನ್‌ಎಚ್ 766ನ 25 ಕಿ.ಮೀ.ಗೆ ಅನ್ವಯಿಸುತ್ತದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧವಿದೆ. ಸುರಂಗ ಮಾರ್ಗವೇನಾದರೂ ನಿರ್ಮಾಣವಾದರೆ ರಾತ್ರಿ ವೇಳೆಯೂ ವಾಹನಗಳು ಮುಕ್ತವಾಗಿ ಸಂಚರಿಸುವುದು ಸಾಧ್ಯವಾಗಲಿದೆ.
ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರ ನಿರ್ಬಂಧ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಕೇಂದ್ರ ಸರ್ಕಾರ ಈ ಹೊಸ ಪ್ರಸ್ತಾಪದ ಕುರಿತು ನ್ಯಾಯಾಲಯದ ಗಮನಕ್ಕೆ ತರಬೇಕಿದೆ.