ಇಂದು ಜಾರ್ಖಂಡ್‌ ಸರ್ಕಾರಕ್ಕೆ ಬಹುಮತ ಅಗ್ನಿಪರೀಕ್ಷೆ

| Published : Feb 05 2024, 01:52 AM IST / Updated: Feb 05 2024, 07:26 AM IST

ಇಂದು ಜಾರ್ಖಂಡ್‌ ಸರ್ಕಾರಕ್ಕೆ ಬಹುಮತ ಅಗ್ನಿಪರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

: ಮಾಜಿ ಸಿಎಂ ಹೇಮಂತ್‌ ಸೊರೇನ್‌ ರಾಜೀನಾಮೆ ಕಾರಣ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂಪೈ ಸೊರೇನ್‌ ನೇತೃತ್ವದ ಜೆಎಂಎಂ-ಕಾಂಗ್ರೆಸ್‌ ಸರ್ಕಾರ ಸೋಮವಾರ ವಿಶ್ವಾಸಮತದ ಅಗ್ನಿಪರೀಕ್ಷೆ ಎದುರಿಸಲಿದೆ.

ರಾಂಚಿ: ಮಾಜಿ ಸಿಎಂ ಹೇಮಂತ್‌ ಸೊರೇನ್‌ ರಾಜೀನಾಮೆ ಕಾರಣ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂಪೈ ಸೊರೇನ್‌ ನೇತೃತ್ವದ ಜೆಎಂಎಂ-ಕಾಂಗ್ರೆಸ್‌ ಸರ್ಕಾರ ಸೋಮವಾರ ವಿಶ್ವಾಸಮತದ ಅಗ್ನಿಪರೀಕ್ಷೆ ಎದುರಿಸಲಿದೆ. 

ಸರ್ಕಾರಕ್ಕೆ ಅಧಿಕೃತವಾಗಿ 46 ಶಾಸಕರ ಬೆಂಬಲವಿದ್ದರೂ, ಮೈತ್ರಿಕೂಟದ ಕೆಲ ಶಾಸಕರು ಬಂಡಾಯ ಎದ್ದಿದ್ದಾರೆ. ಹೀಗಾಗಿ ಇನ್ನಷ್ಟು ಜನರು ಬಂಡಾಯ ಎದ್ದರೆ ಎಂಬ ಭೀತಿ ಸರ್ಕಾರಕ್ಕೆ ಆವರಿಸಿದ್ದು, ವಿಶ್ವಾಸಮತ ಕುತೂಹಲ ಕೆರಳಿಸಿದೆ.ಚಂಪೈ ಸೊರೇನ್‌ ಮೊನ್ನೆ ರಾಜ್ಯಪಾಲರಿಗೆ 43 ಶಾಸಕರ ಬೆಂಬಲ ಪತ್ರ ಮಾತ್ರ ಸಲ್ಲಿಸಿದ್ದರು. 

ಮೂವರ ಸಹಿ ಸಂಗ್ರಹ ಸಾಧ್ಯವಾಗಿರಲಿಲ್ಲ. ಈ ಪೈಕಿ ಲಿಂಡಾ ಹೇಂಬ್ರೋಂ ಹಾಗೂ ಚಾಮ್ರಾ ಲಿಂಡಾ ಎಂಬ ಇಬ್ಬರು ಶಾಸಕರು ಸರ್ಕಾರದ ಬಗ್ಗೆ ಅತೃಪ್ತಿ ಹೊಂದಿದ್ದಾರೆ. 

ಹೇಂಬ್ರೋಂ ಅವರು ಬಹಿರಂಗವಾಗಿಯೇ ಹೇಮಂತ ಸೊರೇನ್‌ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ್ದರೆ, ಚಾಮ್ರಾ ಅವರು ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾರೆ.

ಈ ನಡುವೆ, ಹೈದರಾಬಾದ್‌ ರೆಸಾರ್ಟಲ್ಲಿ ತಂಗಿರುವ ಸುಮಾರು 40 ಜೆಎಂಎಂ-ಕಾಂಗ್ರೆಸ್‌ ಶಾಸಕರು ರಾಂಚಿಗೆ ಮರಳಿ ವಿಶ್ವಾಸಮತದ ವೇಳೆ ಮತ ಚಲಾವಣೆ ಮಾಡಲಿದ್ದಾರೆ. ಜೆಎಂಎಂ-ಕಾಂಗ್ರೆಸ್‌ ಶಾಸಕರನ್ನು ಸೆಳೆದು ಸರ್ಕಾರ ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪವಿದೆ.

 ಹೀಗಾಗಿಯೇ ವಿಶ್ವಾಸಮತ ಯಾಚನೆ ಕುತೂಹಲ ಮೂಡಿಸಿದೆ.81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಯಲ್ಲಿ 1 ಸೀಟು ಖಾಲಿ ಇದ್ದು, ಹಾಲಿ 80 ಶಾಸಕರಿದ್ದಾರೆ. ಬಹುಮತಕ್ಕೆ 41 ಸೀಟ ಬೇಕು. 

ಜೆಎಂಎಂ-ಕಾಂಗ್ರೆಸ್‌ 46 ಹಾಗೂ ಬಿಜೆಪಿ ಮೈತ್ರಿಕೂಟ 29 ಸ್ಥಾನಗಳನ್ನು ಹೊಂದಿವೆ. 5 ಶಾಸಕರು ತಟಸ್ಥರಿದ್ದಾರೆ. ಆದರೆ ಆಡಳಿತ ಕೂಟದ ಇಬ್ಬರು ಶಾಸಕರ ಹೊಯ್ದಾಟ ಸಹಜವಾಗೇ ಸಂಚಲನ ಮೂಡಿಸಿದೆ.