- 4 ಪ್ರಶ್ನೆಗಳನ್ನು ಮುಂದಿಟ್ಟ ತಂಡ

- ಹಗರಣದಲ್ಲಿ ನನ್ನ ಪಾತ್ರವಿಲ್ಲ: ರಾಯ್‌

ಅಯೋಧ್ಯೆ: ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ವಿಶೇಷ ತನಿಖಾ ತಂಡ (ಎಸ್‌ಐಟಿ) ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರನ್ನು ಸತತ 3 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಈ ವೇಳೆ ರಾಯ್‌ , ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದಾರೆ.

ದೇಣಿಗೆ ಸಂಗ್ರಹದಿಂದ ಹಿಡಿದು ಅದು ಬ್ಯಾಂಕ್‌ ಖಾತೆಗೆ ಜಮಾ ಆಗುವ ತನಕದ ಸಂಪೂರ್ಣ ಪ್ರಕ್ರಿಯೆ ಬಗ್ಗೆ ರಾಯ್‌ ಅವರಲ್ಲಿ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಂಡಿದೆ. ಅದರಲ್ಲಿ ಪ್ರಮುಖವಾಗಿ ಹಲವು ಪ್ರಶ್ನೆಗಳನ್ನು ಕೇಳಿದ್ದು, ದೇಣಿಗೆಗಳನ್ನು ಹೇಗೆ ಸಂಗ್ರಹಿಸಲಾಯಿತು? ಹೇಗೆ ಎಣಿಸಲಾಯಿತು? ಯಾವ ರೀತಿ ಜಮಾ ಮಾಡಲಾಯಿತು? ದೇಗುಲ ಹಣದ ನಿರ್ವಹಣೆಯಲ್ಲಿ ಯಾರು ಜವಾಬ್ದಾರರು? ಹಣ ಅಕ್ರಮದ ಬಗ್ಗೆ ಹಿಂದೆ ಗಮನಕ್ಕೆ ಬಂದಿದಿಯೇ? ಟ್ರಸ್ಟ್‌ ಬ್ಯಾಂಕ್‌ ಜತೆಗೆ ಹೇಗೆ ಸಮನ್ವಯ ಸಾಧಿಸಿದೆ? ಎಂದು ಪ್ರಶ್ನಿಸಿ ಉತ್ತರಗಳನ್ನು ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.ಪೊಲೀಸರು ರಾಯ್‌ ಅವರನ್ನು ಆರೋಪಿಯೆಂದು ಪರಿಗಣಿಸಿ ತನಿಖೆ ನಡೆಸದೇ ಟ್ರಸ್ಟ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದರಿಂದ ಪ್ರಮುಖ ಸಾಕ್ಷಿಯೆಂದು ವಿಚಾರಣೆ ನಡೆಸಿದ್ದಾರೆ ಎನ್ನಆಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಟ್ರಸ್ಟ್‌ನ ಸದಸ್ಯ ಅನಿಲ್‌ ಮಿಶ್ರಾರನ್ನು ಸಹ ವಿಚಾರಣೆ ನಡೆಸಿದೆ.ಯುಪಿ ಕೈ ಅಧ್ಯಕ್ಷಗೆ ಗೃಹಬಂಧನ: ರಾಮಮಂದಿರ ಭೇಟಿಗೆ ತಡೆ

ಅಯೋಧ್ಯೆ: ‘ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥಿಸಲು ನಿರ್ಧರಿಸಿದ್ದ ನನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಮಂದಿರ ಭೇಟಿಗೆ ಅವಕಾಶ ನೀಡುವ ತನಕ ಅಯೋಧ್ಯೆ ಬಿಡಲ್ಲ’ ಎಂದು ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್‌ ರಾಯ್‌ ಹೇಳಿದ್ದಾರೆ.ರಾಮಮಂದಿರ ದೇಣಿಗೆ ವಿವಾದಕ್ಕೆ ಸಂಬಂಧಿಸಿದಂತೆ ರಾಯ್‌ ನೇತೃತ್ವದ ಕಾಂಗ್ರೆಸ್‌ ನಿಯೋಗ ರಾಮಮಂದಿರ ಭೇಟಿಗೆ ಮಂಗಳವಾರ ನಿರ್ಧರಿಸಿತ್ತು. ಆದರೆ ತಾವು ತಂಗಿದ್ದ ಹೋಟೆಲ್‌ನಿಂದ ಸರ್ಕಾರಿ ಅತಿಥಿ ಗೃಹಕ್ಕೆ ಸ್ಥಳಾಂತರಿಸಿ ಪೊಲೀಸರ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.‘ರಾಮಮಂದಿರಕ್ಕೆ ನಾವು ಭೇಟಿ ನೀಡುವುದಕ್ಕೆ ಹೆದರುವ ಇದು ಯಾವ ರೀತಿಯ ಸರ್ಕಾರ? ಅವರು ನನ್ನನ್ನು ಬಂಧಿಸಿದ್ದಾರೆ ಎಂದು ಭಾವಿಸುತ್ತೇನೆ. ಆದರೆ ಮಧ್ಯರಾತ್ರಿ ಅತಿಥಿ ಗೃಹಕ್ಕೆ ಕರೆತಂದು ಇಲ್ಲಿ ಏಕೆ ಬಂಧಿಸುತ್ತಾರೆ?’ ಎಂದು ಅಜಯ್‌ ಪ್ರಶ್ನಿಸಿದ್ದಾರೆ.


ರಾಯ್‌ ಅವರನ್ನು ಔಪಚಾರಿಕವಾಗಿ ಬಂಧಿಸಲಾಗಿದೆಯೇ ಎನ್ನುವುದರ ಬಗ್ಗೆ ಪೊಲೀಸರು ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಜು.6ಕ್ಕೆ ರಾಮ ಜನ್ಮಭೂಮಿ ಟ್ರಸ್ಟ್‌ ಸಭೆ

ಅಯೋಧ್ಯೆ: ರಾಮಮಂದಿರ ದೇಣಿಗೆ ಹಗರಣ ಗದ್ದಲ ಎಬ್ಬಿಸಿರುವ ಬೆನ್ನಲ್ಲೇ ಜುಲೈ 6ರಂದು ಸಭೆ ನಡೆಸಲು ರಾಮ ಜನ್ಮಭೂಮಿ ಟ್ರಸ್ಟ್‌ ನಿರ್ಧರಿಸಿದೆ. ಈ ಸಭೆಯಲ್ಲಿ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮತ್ತು ಸದಸ್ಯ ಅನಿಲ್‌ ಮಿಶ್ರಾ ಅವರ ರಾಜೀನಾಮೆ ಅಂಗೀಕರಿಸುವ ಸಾಧ್ಯತೆಯಿದೆ. ಇದರ ಜತೆಗೆ ದೇಣಿಗೆ ಅಕ್ರಮ, ಟ್ರಸ್ಟ್‌ನ ಪುನಾರಚನೆ ಹಾಗೂ ಖಾಲಿಯಿರುವ ಹುದ್ದೆಗಳ ಭರ್ತಿ ಬಗ್ಗೆಯೂ ಚರ್ಚೆಯಾಗಬಹುದು ಎಂದು ತಿಳಿದು ಬಂದಿದೆ.ದೇಣಿಗೆ ಕಳ್ಳತನ ವಿಚಾರದಲ್ಲಿ ಮೋದಿ ಮೌನ ಏಕೆ: ಕಾಂಗ್ರೆಸ್‌ ಪ್ರಶ್ನೆ

ನವೆದಹಲಿ: ‘ರಾಮಮಂದಿರ ದೇಣಿಗೆ ಕಳ್ಳತನ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ನಡುವೆಯೂ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದು ಕೋಟ್ಯಂತರ ಭಕ್ತರ ನಂಬಿಕೆ ಮೇಲಿನ ದಾಳಿ’ ಎಂದು ಕಾಂಗ್ರೆಸ್‌ ಕಿಡಿ ಕಾರಿದೆ.ಮಂಗಳವಾರ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಮಂದಿರದ ಲೂಟಿ ವಿಚಾರದಲ್ಲಿ ಮೋದಿ ಮೌನ ಏಕೆ? ಇದು ಕೋಟ್ಯಂತರ ಜನರ ಧಾರ್ಮಿಕ ನಂಬಿಕೆ ಮೇಲಿನ ನೇರ ದಾಳಿ. ಮೋದಿ ಸರ್ಕಾರವು ಯಾವುದೇ ಪಾರದರ್ಶಕ ಮಾನದಂಡ ಅಥವಾ ಅಥವಾ ಸಾರ್ವಜನಿಕ ಸಮಾಲೋಚನೆ ಇಲ್ಲದೆ ರಾಮ ಜನ್ಮಭೂಮಿ ಟ್ರಸ್ಟ್‌ ರಚಿಸಿತು. ಅದಕ್ಕೆ ಆರ್‌ಎಸ್‌ಎಸ್‌ ಸದಸ್ಯರನ್ನು ನೇಮಿಸಿತು. ಆರ್‌ಟಿಐ ಕಾಯ್ದೆಯಿಂದ ವಿನಾಯಿತಿ ನೀಡಿತು. ಮೋದಿ ಈ ಬಗ್ಗೆ ಮೌನ ಮುರಿಯಬೇಕು’ ಎಂದು ಆಗ್ರಹಿಸಿದರು.

ರಾಮನ ವಿರೋಧಿಗಳಿಗೆ ಈಗ ಆತನ ಮೇಲೆ ಭಕ್ತಿ: ವಿಪಕ್ಷಕ್ಕೆ ಯೋಗಿ ಚಾಟಿ

ರಾಂಪುರ: ರಾಮಮಂದಿರ ದೇಣಿಗೆ ವಿವಾದದಲ್ಲಿ ವಿಪಕ್ಷಗಳ ನಡೆಯನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಟೀಕಿಸಿದ್ದು, ‘ರಾಮ ಭಕ್ತರ ಮೇಲೆ ದಾಳಿ ಮಾಡಿದವರು, ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದವರು, ಈಗ ನಂಬಿಕೆಯ ಹೆಸರಿನಲ್ಲಿ ರಾಮನನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.ಮಂಗಳವಾರ ಮಾತನಾಡಿದ ಅವರು, ‘ಇಂದು ರಾಮನ ಭಕ್ತಿಯನ್ನು ಪ್ರತಿಪಾದಿಸುವವರು 2017ಕ್ಕಿಂತ ಮೊದಲು ಜೈ ಶ್ರೀರಾಮ್‌ ಎಂದವರ ಮೇಲೆ ಲಾಠಿ ಚಾರ್ಜ್‌ಗೆ ಆದೇಶಿಸಿದ್ದರು. ಒಂದು ಕಾಲದಲ್ಲಿ ರಾಮ ಮಂದಿರ ಆಂದೋಲನವನ್ನು ವಿರೋಧಿಸಿದ್ದರು. ರಾಮ ಭಕ್ತರ ಮೇಲೆ ಗುಂಡು ಹಾರಿಸಿದ್ದರು. ರಾಮ ಮತ್ತು ಕೃಷ್ಣನ ಅಸ್ತಿತ್ವವನ್ನು ಪ್ರಶ್ನಿಸಿದ್ದರು. ಆದರೆ ಈಗ ಅದೇ ಜನರು ನಂಬಿಕೆ ಹೆಸರಿನಲ್ಲಿ ಮಾತನಾಡುತ್ತಿದ್ದಾರೆ. ಈಗ ತಮ್ಮ ಹಿಂದಿನ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡುತ್ತಿರಬೇಕು. ಅದಕ್ಕಾಗಿ ಈಗ ಅವರೆಲ್ಲರೂ ಅಯೋಧ್ಯೆಗೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ’ ಎಂದು ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ಗೆ ಚಾಟಿ ಬೀಸಿದರು,