2ಕ್ಕಿಂತ ಕಡಿಮೆ ಮಕ್ಕಳಿದ್ದರೆ ಚುನಾವಣೆಗೆ ಅನರ್ಹ : ಹೊಸ ನೀತಿಗೆ ಆಂಧ್ರ ಮುಖ್ಯಮಂತ್ರಿ ಚಿಂತನೆ

| Published : Jan 17 2025, 12:46 AM IST / Updated: Jan 17 2025, 04:50 AM IST

ಸಾರಾಂಶ

  ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇದೀಗ 2ಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವವರು ಪುರಸಭೆ ಮತ್ತು ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸುವುದರಿಂದ ನಿರ್ಬಂಧಿಸುವ ಹೊಸ ನೀತಿಯನ್ನು ತರಲು ಚಿಂತೆ ನಡೆಸಿದ್ದಾರೆ.

ತಿರುಪತಿ: ಆಂಧ್ರಪ್ರದೇಶದ ಜನಸಂಖ್ಯೆ ನಿರಂತರ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜನ ಅಧಿಕ ಮಕ್ಕಳನ್ನು ಹೊಂದಬೇಕು ಎಂದು ಪ್ರತಿಪಾದಿಸುತ್ತಿದ್ದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇದೀಗ 2ಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವವರು ಪುರಸಭೆ ಮತ್ತು ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸುವುದರಿಂದ ನಿರ್ಬಂಧಿಸುವ ಹೊಸ ನೀತಿಯನ್ನು ತರಲು ಚಿಂತೆ ನಡೆಸಿದ್ದಾರೆ.

2ಕ್ಕಿಂತ ಅಧಿಕ ಮಕ್ಕಳಿದ್ದವರು ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಹೇರಿದ್ದ ನಿರ್ಬಂಧವನ್ನು ಸಿಎಂ ನಾಯ್ಡು ಸರ್ಕಾರ ರದ್ದುಪಡಿಸಿದ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ.

ಪರಿವಾರದೊಂದಿಗೆ ಸಂಕ್ರಾಂತಿ ಆಚರಿಸಿ ಮಾತನಾಡಿದ ನಾಯ್ಡು, ‘ಕಡಿಮೆ ಮಕ್ಕಳಿರುವವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನುಮತಿಸಲಾಗುವುದಿಲ್ಲ. 2ಕ್ಕಿಂದ ಹೆಚ್ಚು ಮಕ್ಕಳಿರುವವರು ಮಾತ್ರ ಸರಪಂಚ್‌, ಪುರಸಭೆ ಸದಸ್ಯ ಅಥವಾ ಮೇಯರ್‌ ಆಗಬಹುದು. ಜೊತೆಗೆ, ಅಂಥವರಿಗೆ, ಪ್ರಸ್ತುತ ಪ್ರತಿ ಕುಟುಂಬಕ್ಕೆ ನೀಡಲಾಗುತ್ತಿರುವ 25 ಕೇಜಿ ಸಬ್ಸಿಡಿ ಅಕ್ಕಿಯ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತಿದ್ದೇವೆ’ ಎಂದರು.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಜನಸಂಖ್ಯೆ ಕುಸಿತ ಸಮಸ್ಯೆಯೊಂದಿಗೆ ಸೆಣಸುತ್ತಿರುವ ದೇಶಗಳ ಉದಾಹರಣೆ ನೀಡುತ್ತಾ, ‘ಜಪಾನ್‌, ಕೊರಿಯಾ ಸೇರಿದಂತೆ ಅನೇಕ ಐರೋಪ್ಯ ದೇಶಗಳು ಕುಟುಂಬ ಯೋಜನೆ ನೀತಿಯನ್ನು ಅನುಸರಿಸಿದ ಕಾರಣ ಈಗ ಅಲ್ಲಿ ವಯಸ್ಸಾದವರ ಜನಸಂಖ್ಯೆಯೇ ಹೆಚ್ಚಾಗಿದೆ. ಇದು ಭಾರತಕ್ಕೂ ಎಚ್ಚರಿಕೆಯ ಕರೆಗಂಟೆಯಾಗಿದೆ. ಈಗಲೇ ಸರಿಯಾದ ನೀತಿಗಳನ್ನು ತಂದರೆ ಬಚಾವಾಗಬಹುದು’ ಎಂದರು.

2 ಮಕ್ಕಳ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದ ದಕ್ಷಿಣ ರಾಜ್ಯಗಳ ಫಲವತ್ತತೆ ದರ 1.73 ಇದ್ದು, ಇದು ದೇಶದ ಸರಾಸರಿಯಾದ 2.1ಕ್ಕಿಂತ ಕಡಿಮೆಯಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ ಹಾಗೂ ಜಾರ್ಖಂಡ್‌ಗಳಲ್ಲಿ ಇದು 2.4ರಷ್ಟಿದೆ.