ಮುಸ್ಲಿಮರ ಶೇ.4ರಷ್ಟು ಮೀಸಲು ರದ್ದಿಲ್ಲ: ಟಿಡಿಪಿ

| Published : Jun 09 2024, 01:32 AM IST / Updated: Jun 09 2024, 04:26 AM IST

ಸಾರಾಂಶ

ಮುಸ್ಲಿಂ ಮೀಸಲು ಓಲೈಕೆ ರಾಜಕಾರಣವಲ್ಲ. ಅದು ಬಡತನದಿಂದ ಹೊರಗೆ ತರುವ ಕ್ರಮ ಎಂಬುದಾಗಿ ನಾಯ್ಡು ಪುತ್ರ ನಾರಾ ಲೋಕೇಶ್‌ ತಿಳಿಸಿದ್ದಾರೆ.

ವಿಜಯವಾಡ: ಆಂಧ್ರಪ್ರದೇಶದಲ್ಲಿ ಹಾಲಿ ಜಾರಿಯಲ್ಲಿರುವ ಶೇ.4ರಷ್ಟು ಮೀಸಲು ಮುಂದುವರೆಯಲಿದೆ ಎಂದು ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ತೆಲುಗುದೇಶಂ ಹೇಳಿದೆ. ಈ ಮೂಲಕ ಒಬಿಸಿ ಕೋಟಾದಲ್ಲಿ ಮುಸ್ಲಿಮರಿಗೆ ಮೀಸಲು ನೀಡುವ ವಿಷಯದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿಗೆ ತದ್ವಿರುದ್ಧವಾದ ತನ್ನ ನಿಲುವನ್ನು ಮುಂದುವರೆಸಿದೆ.

ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್‌, ‘ಒಬಿಸಿ ಕೋಟಾದಡಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲು ನೀಡುವುದು ಓಲೈಕೆ ರಾಜಕಾರಣವಲ್ಲ. 

ಮೀಸಲು ನೀತಿ, ಮುಸ್ಲಿಮರನ್ನು ಬಡತನದಿಂದ ಹೊರಗೆ ತರಲು ರೂಪಿಸಲಾದ ಅಭಿವೃದ್ಧಿಯ ಕ್ರಮ. ಸಮಾಜದ ಒಂದು ವರ್ಗ ಬಡತನದಲ್ಲೇ ಜೀವಿಸುತ್ತಿದ್ದರೆ, ಒಂದು ರಾಜ್ಯ ಅಥವಾ ದೇಶ ಅಭಿವೃದ್ಧಿ ಹೊಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ಕಾರಣದಿಂದಲೇ ರಾಜ್ಯದಲ್ಲಿ ಮುಸ್ಲಿಂ ಮೀಸಲು ಜಾರಿ ಮಾಡಲಾಗಿದೆಯೇ ಹೊರತೂ ಯಾರನ್ನೂ ಒಲೈಕೆ ಮಾಡಲಾಗಲೀ ಅಥವಾ ರಾಜಕೀಯ ಲಾಭ ಪಡೆಯಲಾಗಲೀ ಅಲ್ಲ’ ಎಂದರು.

ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಯಾಗಿ ಬಿಜೆಪಿ ನಾಯಕರು ಆಂಧ್ರಪ್ರದೇಶದಲ್ಲಿ ಜಾರಿಯಲ್ಲಿರುವ ಶೇ.4ರಷ್ಟು ಮುಸ್ಲಿಂ ಮೀಸಲು ಮತ್ತು ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮುಸ್ಲಿಂ ಮೀಸಲು ಯೋಜನೆ ಬಗ್ಗೆ ಬಹುವಾಗಿ ವಿರೋಧ ವ್ಯಕ್ತಪಡಿಸಿದ್ದರು. ಮುಸ್ಲಿಂ ಮೀಸಲನ್ನು ಟಿಡಿಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಪ್ರಸ್ತಾಪಿಸಿತ್ತು. ಆದರೆ ಇದು ಟಿಡಿಪಿ ಪ್ರಣಾಳಿಕೆ, ತನ್ನದಲ್ಲ ಎಂದು ಬಿಜೆಪಿ ಆ ಭರವಸೆಯಿಂದ ದೂರ ಸರಿದಿತ್ತು.

ಪೆಗಾಸಸ್‌ ಬಗ್ಗೆ ತನಿಖೆಗೆ ಆಗ್ರಹ:

ಈ ನಡುವೆ ಜಗನ್‌ ಸರ್ಕಾರ ಪೆಗಾಸಸ್‌ ಕಂಪನಿಯಿಂದ ತಮ್ಮ ಫೋನ್ ಕದ್ದಾಲಿಕೆ ನಡೆಸಿತ್ತು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ನಾರಾ ಲೋಕೇಶ್‌ ಆಗ್ರಹಿಸಿದ್ದಾರೆ.