ಸಾರಾಂಶ
ಪಿಟಿಐ ನವದೆಹಲಿ
ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ನಡೆದಿತ್ತು ಎನ್ನಲಾದ ‘ರೈಲ್ವೆ ಉದ್ಯೋಗಕ್ಕಾಗಿ ಭೂಮಿ ಹಗರಣ’ದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ತನ್ನ ಮೊದಲ ಆರೋಪಪಟ್ಟಿ ದಾಖಲಿಸಿದೆ. ಇದರಲ್ಲಿ ಲಾಲು ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಮತ್ತು ಅವರ ಸಂಸದೆ ಪುತ್ರಿ ಮಿಸಾ ಭಾರತಿ ಸೇರಿ ಹಲವರನ್ನು ಹೆಸರಿಸಿದೆ.
ಲಾಲು ಮತ್ತೊಬ್ಬ ಪುತ್ರಿ ಹೇಮಾ ಯಾದವ್ (40), ಯಾದವ್ ಕುಟುಂಬದ ಆಪ್ತ ಸಹವರ್ತಿ ಅಮಿತ್ ಕತ್ಯಾಲ್ (49), ಮಾಜಿ ರೈಲ್ವೆ ಉದ್ಯೋಗಿ ಹೃದಯಾನಂದ್ ಚೌಧರಿ, 2 ಕಂಪನಿಗಳಾದ ಎಕೆ ಇನ್ಫೋಸಿಸ್ಟಮ್ಸ್ ಪ್ರೈ. ಲಿಮಿಟೆಡ್ ಮತ್ತು ಎಬಿ ಎಕ್ಸ್‌ಪೋರ್ಟ್ಸ್ ಪ್ರೈ. ಲಿಮಿಟೆಡ್‌ಗಳನ್ನೂ ಚಾರ್ಜ್ ಶೀಟ್‌ನಲ್ಲಿ ಹೆಸರಿಸಲಾಗಿದೆ.
ಇದನ್ನು ಪರಿಗಣಸಿದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯ, ಜ.16ರಂದು ಮುಂದಿನ ವಿಚಾರಣೆ ನಿಗದಿಪಡಿಸಿದೆ.
ಈಗಾಗಲೇ ಈ ಹಗರಣದಲ್ಲಿ ಲಾಲು, ಅವರ ಪುತ್ರ ಹಾಗೂ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ವಿಚಾರಣೆ ನಡೆದಿದೆ.
ಏನಿದು ಹಗರಣ?:
ಲಾಲು ಯುಪಿಎ-1 ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಅವಧಿಗೆ ಸಂಬಂಧಿಸಿದ ಹಗರಣವಾಗಿದೆ. 2004ರಿಂದ 2009ರವರೆಗೆ, ಭಾರತೀಯ ರೈಲ್ವೆಯ ವಿವಿಧ ವಲಯಗಳಲ್ಲಿ ಗ್ರೂಪ್ ‘ಡಿ‘ ಹುದ್ದೆಗಳಿಗೆ ಹಲವನ್ನು ನೇಮಿಸಲಾಗಿತ್ತು. ಇವರು ನೌಕರಿ ಪಡೆಯಲು ಲಂಚ ರೂಪದಲ್ಲಿ ತಮ್ಮ ಜಮೀನನ್ನು ಲಾಲು ಕುಟುಂಬ ಸದಸ್ಯರಿಗೆ/ಕಂಪನಿಗಳಿಗೆ ವರ್ಗಾಯಿಸಿದ್ದಾರೆ ಎಂಬ ಆರೋಪವಿದೆ.