ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ರೋಗಿಯೊಬ್ಬರ ಪುತ್ರ 7 ಬಾರಿ ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ಮಂಗಳವಾರ ಚೆನ್ನೈನಲ್ಲಿ ನಡೆದಿದೆ.

ಚೆನ್ನೈ: ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ರೋಗಿಯೊಬ್ಬರ ಪುತ್ರ 7 ಬಾರಿ ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ಮಂಗಳವಾರ ಚೆನ್ನೈನಲ್ಲಿ ನಡೆದಿದೆ. ದಾಳಿಯಲ್ಲಿ ವೈದ್ಯ ಬಾಲಾಜಿ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಲ್ಕತ್ತಾ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬೆನ್ನಲ್ಲೇ ವೈದ್ಯರ ರಕ್ಷಣೆಗೆ ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಇಲ್ಲಿನ ಕಲೈಗ್ನಾರ್‌ ಸೆಂಟಿನರಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವಿಘ್ನೇಶ್‌ ಎಂಬಾತನ ತಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ತಾಯಿಗೆ ನೀಡಿದ ಚಿಕಿತ್ಸೆ ಕುರಿತು ಅಸಮಾಧಾನಗೊಂಡಿದ್ದ ವಿಘ್ನೇಶ್‌ ಮಂಗಳವಾರ ಡಾ.ಬಾಲಾಜಿ ಅವರ ಮೇಲೆ 7 ಬಾರಿ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ಬಾಲಾಜಿ ಎದೆಯ ಮೇಲ್ಭಾಗ, ಹಣೆ, ಬೆನ್ನು, ತಲೆ, ಹೊಟ್ಟೆ, ಕಿವಿಯ ಹಿಂಭಾಗ ಸೇರಿ 7 ಕಡೆಗಳಲ್ಲಿ ಗಾಯಗಳಾಗಿದ್ದು, ವಿಪರೀತ ರಕ್ತಸ್ರಾವವಾಗಿದೆ.

ಘಟನೆಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಸುಬ್ರಮಣಿಯನ್‌, ‘ಆರೋಪಿ ಚಾಕುವನ್ನು ಅಡಗಿಸಿಟ್ಟುಕೊಂಡಿದ್ದ. ಉಳಿದಂತೆ ಯಾವುದೇ ಭದ್ರತಾ ಲೋಪ ಆಗಿಲ್ಲ’ ಎಂದಿದ್ದಾರೆ. ಅತ್ತ ವೈದ್ಯರ ನಿಸ್ವಾರ್ಥ ಸೇವೆ ಶ್ಲಾಘಿಸಿರುವ ಸಿಎಂ ಸ್ಟಾಲಿನ್‌, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ರಕ್ಷಣೆ ಕೋರಿ ಅನಿರ್ದಿಷ್ಟ ಮುಷ್ಕರಕ್ಕಿಳಿದಿರುವ ಸರ್ಕಾರಿ ವೈದ್ಯರು, ಬುಧವಾರದಿಂದ ತುರ್ತು ಸೇವೆಗಳನ್ನು ಹೊರತುಪಡಿಸಿ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.