ಎನ್‌ಡಿಎ ತೊರೆದು ಪಿಕೆ ಜತೆ ಚಿರಾಗ್‌ ಪಾಸ್ವಾನ್‌ ಮೈತ್ರಿ?

| Published : Oct 08 2025, 01:00 AM IST

ಸಾರಾಂಶ

ಬಿಹಾರದಲ್ಲಿ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಕುತೂಹಲದ ರಾಜಕೀಯ ತಿರುವುಗಳು ಕಂಡುಬರುತ್ತಿವೆ. ಎಲ್‌ಜೆಪಿ (ರಾಮ್‌ವಿಲಾಸ್) ಪಕ್ಷದ ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಅವರು, ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್ ಅವರ ಜನ್‌ ಸುರಾಜ್‌ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪಟನಾ: ಬಿಹಾರದಲ್ಲಿ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಕುತೂಹಲದ ರಾಜಕೀಯ ತಿರುವುಗಳು ಕಂಡುಬರುತ್ತಿವೆ. ಎಲ್‌ಜೆಪಿ (ರಾಮ್‌ವಿಲಾಸ್) ಪಕ್ಷದ ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಅವರು, ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್ ಅವರ ಜನ್‌ ಸುರಾಜ್‌ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

‘ಸದ್ಯ ಎನ್‌ಡಿಎ ಕೂಟದಲ್ಲಿರುವ ಪಾಸ್ವಾನ್‌, ತಮ್ಮ ಪಕ್ಷಕ್ಕೆ 40 ಸೀಟು ಕೇಳಿದ್ದಾರೆ. ಆದರೆ ಬಿಜೆಪಿ 25ಕ್ಕಿಂತ ಹೆಚ್ಚು ಸೀಟು ನೀಡಲು ಸಿದ್ಧವಿಲ್ಲ. ಹೀಗಾಗಿ ಅವರು ಎನ್‌ಡಿಎ ತೊರೆದು ಪಿಕೆ ಸ್ನೇಹ ಬೆಳೆಸುವ ಯೋಚನೆಯಲ್ಲಿದ್ದಾರೆ. ಯಾವುದೇ ಸಾಧ್ಯತೆ ತಳ್ಳಿಹಾಕುವಂತಿಲ್ಲ’ ಎಂದು ಅವು ಹೇಳಿವೆ.

==

ಬಿಹಾರ: ಜೆಡಿಯು-ಬಿಜೆಪಿ ಸಮನಾಗಿ ಸೀಟು ಹಂಚಿಕೆ?

ಪಟನಾ: ಬಿಹಾರ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಎನ್‌ಡಿಎ ಕೂಟದಲ್ಲಿ ಸೀಟು ಹಂಚಿಕೆ ಲೆಕ್ಕಾಚಾರ ಆರಂಭವಾಗಿದೆ. ಬಿಜೆಪಿ ಮತ್ತು ಜೆಡಿಯು ಸಮಾನ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.243 ಸೀಟುಗಳಲ್ಲಿ 38 ಸೀಟನ್ನು ಮಿತ್ರಪಕ್ಷಗಳಿಗೆ ನೀಡಿ ಉಳಿದ 205 ಸೀಟುಗಳಲ್ಲಿ ಸಮಾನ ಪಾಲುದಾರಿಕೆ ಪಡೆಯುವ ಬಗ್ಗೆ ಚರ್ಚೆ ನಡೆದಿದೆ ಎಂದು ಅವು ಹೇಳಿವೆ.

ಉಳಿದ 38 ಸ್ಥಾನಗಳಲ್ಲಿ ಚಿರಾಗ್ ಪಾಸ್ವಾನ್‌ರ ಎಲ್‌ಜೆಪಿಗೆ 25 ಸ್ಥಾನ, ಜೀತನ್‌ ರಾಂ ಮಾಂಝಿ ಅವರ ಹಮ್‌ ಪಕ್ಷಕ್ಕೆ 7 ಹಾಗೂ ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಂಗೆ ಆರು ಸ್ಥಾನಗಳನ್ನು ನೀಡುವ ಸಾಧ್ಯತೆ ಇದೆ.

==

ಬಿಹಾರ ಮತಪಟ್ಟಿಯಿಂದ ತೆಗೆದ 3.7 ಲಕ್ಷ ಜನರ ವಿವರಕ್ಕೆ ಸುಪ್ರೀಂ ಸೂಚನೆ

- ಸುಪ್ರೀಂ ಮಧ್ಯ ಪ್ರವೇಶದಿಂದ ಪಾರದರ್ಶಕತೆ: ಪೀಠ

ನವದೆಹಲಿ: ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸಿದ ಮತಪಟ್ಟಿ ವಿಶೇಷ ಪರಿಷ್ಕರಣೆಯ ಬಳಿಕ ತೆಗೆದುಹಾಕಲಾಗಿರುವ 3.66 ಲಕ್ಷ ಮತದಾರರ ವಿವರಗಳನ್ನು ಆ.9ರೊಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಒಟ್ಟು 47 ಲಕ್ಷ ಮತದಾರರ ಹೆಸರನ್ನು ಆಯೋಗ ಡಿಲೀಟ್‌ ಮಾಡಿತ್ತು. ಆದರೆ, ಮೃತರು, ಡುಪ್ಲಿಕೇಷನ್‌ ಹಾಗೂ ಸ್ಥಳಾಂತರಿಗಳನ್ನು ಹೊರತುಪಡಿಸಿ, ಮಿಕ್ಕ 3.66 ಲಕ್ಷ ಮತದಾರರ ಹೆಸರು ಅಳಿಸಿದ್ದಕ್ಕೆ ಕಾರಣ ಬಹಿರಂಗವಾಗಿಲ್ಲ. ಹೀಗಾಗಿ ಇವರ ಮಾಹಿತಿಯನ್ನು ಕೋರ್ಟ್ ಬಯಸಿದೆ.ಈ ಕುರಿತು ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ‘ಅಂತಿಮ ಪಟ್ಟಿಯಲ್ಲಿ ಒಟ್ಟು 3.66 ಲಕ್ಷ ಮತದಾರರನ್ನು ತೆಗೆದುಹಾಕಲಾಗಿದೆ. ಅವರು ಮೃತರು, ವಲಸೆ ಹೋಗಿರುವ ಬಗ್ಗೆ ಕಾರಣಗಳಿವೆ. ಈ ಎಲ್ಲಾ ಮಾಹಿತಿಗಳನ್ನು ಅ.9ರ ಒಳಗೆ ಸಲ್ಲಿಸಿ. ಜೊತೆಗೆ ಹೆಸರುಗಳನ್ನು ತೆಗೆದಿರುವ ಬಗ್ಗೆ ಕಾರಣ ಸಮೇತ ಮಾಹಿತಿ ಕೊಡಿ’ ಎಂದು ಸೂಚಿಸಿತು.

ಜೊತೆಗೆ ಮತಪಟ್ಟಿ ಪರಿಷ್ಕರಣೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶದಿಂದಾಗಿ ಪಾರದರ್ಶಕತೆ ಬಂದಿದೆ. ಜನರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಆಸಕ್ತಿ ಬಂದಿದೆ ಎಂದೂ ಹೇಳಿತು.