ಸಾರಾಂಶ
ಮುಂಬೈ: ಬಿಎಂಡಬ್ಲ್ಯೂ ಕಾರ್ ಅಪಘಾತದ ಬಳಿಕ ಪರಾರಿಯಾಗಿದ್ದ ಮಿಹಿರ್ ಶಾ, ಅಪಘಾತ ಸ್ಥಳದಿಂದ ತನ್ನ ಪ್ರಿಯತಮೆಗೆ 40 ಬಾರಿ ಕರೆ ಮಾಡಿದ್ದ. ಘಟನೆ ಬಳಿಕ ಮಿಹಿರ್‌ಗೆ ದಿಕ್ಕು ತೋಚದಂತಾಗಿ ಗೆಳತಿಗೆ ಕರೆ ಮಾಡಿ ಸಲಹೆ ಪಡೆದಿದ್ದ.
ಬಳಿಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಪ್ರಿಯತಮೆಯನ್ನು ವಿಚಾರಣೆಗೆ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ. ಜೊತೆಗೆ ಪೊಲೀಸರಿಗೆ ತನ್ನ ಸುಳಿವು ಸಿಗದಂತೆ ಕಾಣಲು ಗಡ್ಡ, ತಲೆ ಕೂದಲು ತೆಗೆದುಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜು.16ರವರೆಗೆ ಕಸ್ಟಡಿ: ಮಂಗಳವಾರ ಬಂಧಿತನಾದ ಮಿಹಿರ್‌ನನ್ನು ಪೊಲೀಸರು ಮುಂಬೈ ನ್ಯಾಯಾಲಯದ ಎದುರು ಹಾಜರುಪಡಿಸಿದರು. ನ್ಯಾಯಾಲಯ ಮಿಹಿರ್‌ನನ್ನು ಜು.16ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು.==
ಬಿಎಂಡಬ್ಲ್ಯುಕಾರು ಅಪಘಾತ: ಆರೋಪಿ ತಂದೆ ರಾಜೇಶ್ ಶಿವಸೇನೆಯಿಂದ ಅಮಾನತು
ಮುಂಬೈ: ಮುಂಬೈನ ವರ್ಲಿಯಲ್ಲಿ ಬಿಎಂಡಬ್ಲ್ಯು ಕಾರು ಗುದ್ದಿ ಮಹಿಳೆ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆಆರೋಪಿ ಮಿಹಿರ್ ಶಾನ ತಂದೆ ರಾಜೇಶ್ ಶಾ ಅವರನ್ನು ಶಿವಸೇನೆ(ಶಿಂಧೆ ಬಣ) ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ರಾಜೇಶ್ ಅವರು ಪಾಲ್ಘರ್ ಜಿಲ್ಲೆಯ ಉಪಾಧ್ಯಕ್ಷರಾಗಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜೇಶ್ ಅವರ ಬಂಧನದ ನಾಲ್ಕು ದಿನಗಳ ನಂತರ ಅಮಾನತುಗೊಳಿಸಿದ್ದಾರೆ. ಮಂಗಳವಾರ ತಲೆ ಮರೆಸಿಕೊಂಡಿದ್ದ ಆರೋಪಿ ಮಿಹಿರ್ ಶಾನನ್ನು ಪೊಲೀಸರು ಬಂಧಿಸಿದ್ದರು. ಅಪಘಾತ ನಡೆದ ಬಳಿಕ, ಮಗ ನಾಪತ್ತೆಯಾದ ಬೆನ್ನಲ್ಲೇ ಭಾನುವಾರ ತಂದೆಯಾದ ರಾಜೇಶ್ ಶಾರನ್ನು ಬಂಧಿಸಲಾಗಿತ್ತು. ಬಳಿಕ ಸೋಮವಾರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.