ಸಾರಾಂಶ
ನವದೆಹಲಿ: ಖಾಸಗಿ ವಲಯದಲ್ಲಿ ದೇಶದಲ್ಲೇ 2ನೇ ಅತಿದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ವಿವಿಧ ಪ್ರದೇಶಗಳಲ್ಲಿ ತನ್ನ ಗ್ರಾಹಕರು ಹೊಂದಿರಬೇಕಾದ ಮಾಸಿಕ ಮಿನಿಮಂ ಬ್ಯಾಲೆನ್ಸ್ ಮಿತಿಯಲ್ಲಿ ಭಾರೀ ಏರಿಕೆ ಮಾಡಿದೆ.
ಆ.1ರ ಬಳಿಕ ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ಹೊಸ ಖಾತೆ ಆರಂಭಿಸುವವರು ಮಾಸಿಕ ಕನಿಷ್ಠ 50000 ರು.ಸರಾಸರಿ ಬ್ಯಾಲೆನ್ಸ್ ಹೊಂದಿರುವುದು ಕಡ್ಡಾಯ. ಹಳೆಯ ಗ್ರಾಹಕರಿಗೆ ಈ ಮಿತಿ 10000 ರು.ನಲ್ಲೇ ಮುಂದುವರೆಯಲಿದೆ.
ದೇಶದ ಎರಡನೇ ಅತಿದೊಡ್ಡ ಸಾಲದಾತ ಎನಿಸಿಕೊಂಡಿರುವ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದ್ದು, ಆ.1ರಿಂದ ಜಾರಿಗೆ ಬರುವಂತೆ ಗ್ರಾಹಕರ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ಮಿತಿಯನ್ನು 10, 000 ರು.ನಿಂದ 50,000 ರು. ಗೆ ಹೆಚ್ಚಿಸಿದೆ.
ಇನ್ನು ಸೆಮಿಅರ್ಬನ್ ನಗರಗಳಲ್ಲಿ ಈ ಮಿತಿಯನ್ನು 10000 ರು.ನಿಂದ 25000 ರು.ಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮಿತಿಯನ್ನು 10000 ರು.ಗೆ ನಿಗದಿ ಮಾಡಲಾಗಿದೆ. ಹೊಸದಾಗಿ ಖಾತೆ ತೆರೆಯುವ ಗ್ರಾಹಕರು ಕನಿಷ್ಠ ಮೊತ್ತದ ಮಿತಿ ನಿಯಮ ಪಾಲಿಸದಿದ್ದರೆ, ಕೊರತೆ ಹಣದ ಶೇ.6ರಷ್ಟು ಅಥವಾ 500 ರು.ದಂಡ ವಿಧಿಸಲು ಬ್ಯಾಂಕ್ ನಿರ್ಧರಿಸಿದೆ.