ಸಾರಾಂಶ
ನವದೆಹಲಿ: ಸೇನೆಗೆ ಅಲ್ಪಾವಧಿಗೆ ಯೋಧರನ್ನು ನೇಮಕ ಮಾಡಿಕೊಳ್ಳುವ ಅಗ್ನಿವೀರ ಯೋಜನೆಗೆ ವಿಪಕ್ಷ ಮತ್ತು ಎನ್‌ಡಿಎ ಮೈತ್ರಿಕೂಟದ ಕೆಲ ಪಕ್ಷಗಳಿಂದಲೇ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಬಿಎಸ್‌ಎಫ್ ಮತ್ತು ಸಿಐಎಸ್‌ಎಫ್‌ನಲ್ಲೂ ಮಾಜಿ ಅಗ್ನಿವೀರರಿಗೆ ಶೇ.10ರಷ್ಟು ಮೀಸಲು ನೀಡಲು ನಿರ್ಧರಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯ ಆದೇಶದ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಎಸ್‌ಎಫ್ ಮತ್ತು ಸಿಐಎಸ್‌ಎಫ್ ಗುರುವಾರ ಪ್ರಕಟಿಸಿವೆ.
ಈ ಕುರಿತು ಹೇಳಿಕೆ ನೀಡಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಪ್ರಧಾನ ನಿರ್ದೇಶಕ ನೀನಾ ಸಿಂಗ್ ಮತ್ತು ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪ್ರಧಾನ ನಿರ್ದೇಶಕ ನಿತಿನ್ ಅಗರ್‌ವಾಲ್, ಮುಂದಿನ ದಿನಗಳಲ್ಲಿ ಕಾನ್‌ಸ್ಟೇಬಲ್‌ಗಳ ನೇಮಕದ ವೇಳೆ ನಿವೃತ್ತ ಅಗ್ನಿವೀರರಿಗೆ ಶೇ.10ರಷ್ಟು ಮೀಸಲು ನೀಡಲಾಗುವುದು ಎಂದು ತಿಳಿಸಿದರು.
ಈ ನೇಮಕದ ವೇಳೆ ಅಗ್ನಿವೀರರಿಗೆ ದೈಹಿಕ ಪರೀಕ್ಷೆಯಿಂದ ವಿನಾಯ್ತಿ ಇರುತ್ತದೆ. ಜೊತೆಗೆ ಅಗ್ನಿವೀರರ ಮೊದಲ ತಂಡಕ್ಕೆ ಈ ಸೇರ್ಪಡೆ ವೇಳೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ನಂತರ ಬ್ಯಾಚ್‌ಗಳಿಗೆ ಈ ಸಡಿಲಿಕೆ 3 ವರ್ಷಕ್ಕೆ ಸೀಮಿತವಾಗಿರಲಿದೆ ಎಂದು ತಿಳಿಸಿದ್ದಾರೆ.
2022ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಅಗ್ನಿವೀರ ಯೋಜನೆಯಡಿ ಕನಿಷ್ಠ 17.5 ವರ್ಷ ಮತ್ತು ಗರಿಷ್ಠ 21 ವರ್ಷದವರನ್ನು 4 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. 4 ವರ್ಷಗಳ ಬಳಿಕ ಶೇ.25ರಷ್ಟು ಜನರನ್ನು ಖಾಯಂ ಆಗಿ ನೇಮಿಸಿಕೊಂಡು ಉಳಿದವರಿಗೆ ಕೆಲವೊಂದು ಸವಲತ್ತು ಕೊಟ್ಟು ಹುದ್ದೆಯಿಂದ ನಿವೃತ್ತಿ ನೀಡಲಾಗುತ್ತದೆ.
ವಿಪಕ್ಷಗಳ ತೀವ್ರ ವಿರೋಧ
ಆದರೆ ಲಕ್ಷಾಂತರ ಜನರು ಹೀಗೆ ನಿವೃತ್ತಿಯಾದ ಬಳಿಕ ಉದ್ಯೋಗದ ಸಮಸ್ಯೆ ಎದುರಿಸುವಂತಾಗುತ್ತದೆ. ಹೀಗಾಗಿ ಯೋಜನೆ ರದ್ದು ಮಾಡಬೇಕು ಎಂಬುದು ವಿಪಕ್ಷಗಳ ಒತ್ತಾಯ. ಕೇಂದ್ರದಲ್ಲಿ ತಾನು ಅಧಿಕಾರಕ್ಕೆ ಬಂದರೆ ಯೋಜನೆ ರದ್ದು ಮಾಡುವುದಾಗಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಭರವಸೆ ನೀಡಿದ್ದವು. ಮತ್ತೊಂದೆಡೆ ಎನ್‌ಡಿಎ ಮೈತ್ರಿಕೂಟದ ಪಕ್ಷಗಳಾದ ಜೆಡಿಯು ಮತ್ತು ಎಲ್‌ಜೆಪಿ ಕೂಡಾ ಯೋಜನೆಯಲ್ಲಿ ಬದಲಾವಣೆ ಕುರಿತು ಬಲವಾಗಿ ವಾದ ಮಂಡಿಸಿದ್ದವು.
ಅಗ್ನಿವೀರ ಯೋಜನೆ ಏಕೆ?
ಸೇನೆಗೆ ಯುವಶಕ್ತಿ ತುಂಬಲು, ಹೊಸ ಸ್ಥೈರ್ಯ ತುಂಬಲು ಮತ್ತು ಯುವಸಮೂಹವನ್ನು ಸೇನೆಗೆ ಸೇರ್ಪಡೆ ಮಾಡುವ ಮೂಲಕ ಅವರಲ್ಲಿನ ದೇಶಭಕ್ತಿ ಜಾಗೃತಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಯೋಜನೆ ಜಾರಿಗೊಳಿಸಿತ್ತು. ಸೇನೆಯಲ್ಲಿ ಯೋಧರ ಸರಾಸರಿ ವಯಸ್ಸನ್ನು 4-6 ವರ್ಷ ಇಳಿಸುವ ಗುರಿಯೂ ಇತ್ತು.