140 ಕೋಟಿ ಜನರು ಒಟ್ಟಾಗಿ 2047ಕ್ಕೆ ಭಾರತವನ್ನು ವಿಕಸಿತ ಭಾರತ ಮಾಡಲು ಸಾಧ್ಯ : ಪ್ರಧಾನಿ ನರೇಂದ್ರ ಮೋದಿ

| Published : Aug 16 2024, 12:47 AM IST / Updated: Aug 16 2024, 05:39 AM IST

ಸಾರಾಂಶ

‘40 ಕೋಟಿ ಜನರು ಒಟ್ಟಾಗಿ ಜಗತ್ತಿನ ಬಲಾಢ್ಯ ದೇಶದ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಸಾಧ್ಯವಾಗಿದ್ದರೆ, 140 ಕೋಟಿ ಜನರು ಒಟ್ಟಾಗಿ 2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸಾಧ್ಯವಿಲ್ಲವೇ?’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

 ನವದೆಹಲಿ :  ‘40 ಕೋಟಿ ಜನರು ಒಟ್ಟಾಗಿ ಜಗತ್ತಿನ ಬಲಾಢ್ಯ ದೇಶದ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಸಾಧ್ಯವಾಗಿದ್ದರೆ, 140 ಕೋಟಿ ಜನರು ಒಟ್ಟಾಗಿ 2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸಾಧ್ಯವಿಲ್ಲವೇ?’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

78ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪುನಃ ತಮ್ಮ ‘ವಿಕಸಿತ ಭಾರತ’ದ ಕನಸನ್ನು ಪ್ರಸ್ತಾಪಿಸಿದ ಅವರು, ಅಭಿವೃದ್ಧಿ ಹೊಂದಿದ ಭಾರತ ಹೇಗಿರಬೇಕು ಎಂಬ ಬಗ್ಗೆ ಕೋಟ್ಯಂತರ ಜನರು ಸಲಹೆ ನೀಡಿದ್ದಾರೆ. ಭಾರತವನ್ನು ಜಗತ್ತಿನ ‘ಕೌಶಲ್ಯಗಳ ರಾಜಧಾನಿ’ ಮಾಡಬೇಕು, ದೇಶದಲ್ಲಿ ನ್ಯಾಯಾಂಗ ಸುಧಾರಣೆಯಾಗಬೇಕು, ಭಾರತವನ್ನು ಉತ್ಪಾದನಾ ಹಬ್‌ ಮಾಡಬೇಕು, ದೇಶದ ವಿಶ್ವವಿದ್ಯಾಲಯಗಳನ್ನು ಜಾಗತಿಕ ಮಟ್ಟಕ್ಕೆ ಏರಿಸಬೇಕು, ದೇಶದಲ್ಲಿ ‘ಗ್ಲೋಬಲ್‌ ಮೀಡಿಯಾ’ ಇರಬೇಕು, ದೇಶದಲ್ಲಿ ಹೊಸ ನಗರಗಳನ್ನು ಕಟ್ಟಬೇಕು, ಭಾರತ ಎಲ್ಲಾ ವಿಷಯದಲ್ಲೂ ಸ್ವಾವಲಂಬಿಯಾಗಬೇಕು... ಹೀಗೆ ನಾನಾ ಸಲಹೆಗಳು ಬಂದಿವೆ. ಅವುಗಳನ್ನು ನೋಡಿದರೆ ವಿಕಸಿತ ಭಾರತದಲ್ಲಿ ಜನರಿಗಿರುವ ಆತ್ಮವಿಶ್ವಾಸ ಎದ್ದು ಕಾಣುತ್ತದೆ ಎಂದು ಹೇಳಿದರು.

ವಿಕಸಿತ ಭಾರತವು ಆರೋಗ್ಯವಂತ ಭಾರತವೂ ಆಗಿರಬೇಕು. ಆ ಗುರಿ ತಲುಪಲು ಇಂದಿನಿಂದಲೇ ನಾವು ಮಕ್ಕಳಿಗೆ ಪೌಷ್ಟಿಕ ಆಹಾರ ಲಭಿಸುವಂತೆ ನೋಡಿಕೊಳ್ಳಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ನಾವು ದೇಶಾದ್ಯಂತ ಪೌಷ್ಟಿಕಾಂಶದ ಆಂದೋಲನಕ್ಕೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.

140 ಕೋಟಿ ಭಾರತೀಯರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ದೇಶವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡಲು ಸಾಧ್ಯವಿದೆ. ಈಗ ನಡೆಯುತ್ತಿರುವುದು ಭಾರತಕ್ಕೆ ಸುವರ್ಣಯುಗ. ದೇಶದ 140 ಕೋಟಿ ಜನರ ನರನಾಡಿಗಳಲ್ಲಿ ನಮ್ಮ ಪೂರ್ವಜ ಸ್ವಾತಂತ್ರ್ಯ ಹೋರಾಟಗಾರರ ರಕ್ತವನ್ನು ನಾನು ನೋಡುತ್ತಿದ್ದೇನೆ. 2047 ನಮಗಾಗಿ ಕಾಯುತ್ತಿದೆ. ಹೋರಾಟ ನಡೆಸಿ ಸ್ವಾತಂತ್ರ್ಯ ಪಡೆದ ದೇಶ ನಮ್ಮದು. ಅಭವೃದ್ಧಿಯ ಹಾದಿಯಲ್ಲಿರುವ ಅಡೆತಡೆಗಳನ್ನೆಲ್ಲ ನಾವು ದೃಢ ನಿಶ್ಚಯದೊಂದಿಗೆ ತೊಡೆದುಹಾಕುತ್ತೇವೆ ಎಂದು ಮೋದಿ ಅಭಿಪ್ರಾಯಪಟ್ಟರು.

ವಿಕಸಿತ ಭಾರತ ಎಂಬುದು ಕೇವಲ ಭಾಷಣದಲ್ಲಿ ಹೇಳುವ ಪದಗಳಲ್ಲ. ಈ ಗುರಿ ತಲುಪಲು ಸಾಕಷ್ಟು ಕಾರ್ಯಕ್ರಮಗಳನ್ನು ಈಗಾಗಲೇ ಆರಂಭಿಸಲಾಗಿದೆ. ತಮ್ಮ ಕನಸಿನ ಭಾರತ ಹೇಗಿರಬೇಕು ಎಂಬ ಬಗ್ಗೆ ಜನರು ಅಸಂಖ್ಯ ಸಲಹೆಗಳನ್ನು ನೀಡಿದ್ದಾರೆ ಎಂದೂ ತಿಳಿಸಿದರು.