ಅರುಣಾಚಲದ ರಾಜಧಾನಿ ಇಟಾನಗರದಲ್ಲಿ ಮೇಘಸ್ಫೋಟ, ಪ್ರವಾಹಸ್ಥಿತಿ

| Published : Jun 24 2024, 01:38 AM IST / Updated: Jun 24 2024, 03:52 AM IST

ಸಾರಾಂಶ

ಅರುಣಾಚಲ ಪ್ರದೇಶ ರಾಜಧಾನಿ ಇಟಾನಗರದಲ್ಲಿ ಭಾನುವಾರ ಬೆಳಗ್ಗೆ ಮೇಘಸ್ಫೋಟ ಸಂಭವಿಸಿದೆ. ಪರಿಣಾಮವಾಗಿ ಗುಡ್ಡ ಕುಸಿತವಾಗಿ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇಟಾನಗರ:  ಅರುಣಾಚಲ ಪ್ರದೇಶ ರಾಜಧಾನಿ ಇಟಾನಗರದಲ್ಲಿ ಭಾನುವಾರ ಬೆಳಗ್ಗೆ ಮೇಘಸ್ಫೋಟ ಸಂಭವಿಸಿದೆ. ಪರಿಣಾಮವಾಗಿ ಗುಡ್ಡ ಕುಸಿತವಾಗಿ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

 ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದ್ದ ಇಟಾನಗರದಲ್ಲಿ 2 ದಿನಗಳಿಂದ ಪರಿಸ್ಥಿತಿ ಸುಧಾರಿಸಿತ್ತು. ಭಾನುವಾರ ಮಳೆ ಸಾಧ್ಯತೆ ಇಲ್ಲದಿದ್ದರೂ, ಬೆಳಗ್ಗೆ 10:30ರ ವೇಳೆಗೆ ಮೇಘಸ್ಫೋಟವಾಗಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರಿಗೆ ಸುರಕ್ಷಿತ ಸ್ಥಳದಲ್ಲಿರುವಂತೆ ವಿಪತ್ತು ನಿರ್ವಹಣಾ ಇಲಾಖೆ ಸೂಚನೆ ನೀಡಿದ್ದು, 7 ನಿರಾಶ್ರಿತರ ಕೇಂದ್ರಗಳನ್ನು ತೆರೆದಿದೆ.

==

ಅಸ್ಸಾಂನಲ್ಲಿ ನಿಲ್ಲದ ಪ್ರವಾಹ: 1.17 ಲಕ್ಷ ಜನ ಅತಂತ್ರ

ಗುವಾಹಟಿ: ಅಸ್ಸಾಂನಲ್ಲಿ ಭಾರೀ ಮಳೆಯಿಂದ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿ ಹಾಗೆಯೇ ಮುಂದುವರೆದಿದೆ 10 ಜಿಲ್ಲೆಗಳಲ್ಲಿ ಭೀಕರ ಪ್ರವಾಹದ ಪರಿಸ್ಥಿತಿ ಮುಂದುವರೆದಿದ್ದು 1.17 ಲಕ್ಷ ಜನರು ತತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹೀಮಂತ್‌ ಬಿಸ್ವಾಸ್‌ ಶರ್ಮಾ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದು,‘ 10 ಜಿಲ್ಲೆಗಳ 27 ಕಂದಾಯ ವಲಯಗಳ 968 ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿದೆ’ ಎಂದು ಬಿಸ್ವಾಸ್ ತಿಳಿಸಿದ್ದಾರೆ.

ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರ ರಕ್ಷಣೆಗೆ ಈಗಾಗಲೇ ಸರ್ಕಾರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಸರ್ಕಾರ ನಿರಾಶ್ರಿತರಿಗೆ ಶಿಬಿರಗಳನ್ನು ತೆರೆದಿದ್ದು, ಆ ಶಿಬಿರಗಳಲ್ಲಿ ಒಟ್ಟು 17,661 ಮಂದಿ ಆಶ್ರಯ ಪಡೆದಿದ್ದಾರೆ. ಈ ನಡುವೆಯೇ ಅಸ್ಸಾಂನ ಕುಶಿಯಾರಾ ನದಿಯು ಬರಾಕ್ ಕಣಿವೆಯ ಕರೀಮ್‌ ಗಂಜ್‌ನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶನಿವಾರ ಪ್ರವಾಹಕ್ಕೆ ಇಬ್ಬರು ಬಲಿಯಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.