ತ.ನಾಡಲ್ಲಿ ರಾಜ್ಯ ಸರ್ಕಾರದಿಂದಲೇ ಅಗ್ಗದ ಔಷಧ ಒದಗಿಸುವ 'ಮುದಲ್ವಾರ್‌ ಮರುಂಧಗಂಗಲ್‌' ಚಾಲನೆ

| N/A | Published : Feb 25 2025, 12:48 AM IST / Updated: Feb 25 2025, 05:47 AM IST

ಸಾರಾಂಶ

ಮೋದಿ ಸರ್ಕಾರದ ಜನೌಷಧಿ ರೀತಿಯಲ್ಲಿ ತಮಿಳುನಾಡಿನಾದ್ಯಂತ ಸಬ್ಸಿಡಿ ದರದಲ್ಲಿ ಜನರಿಗೆ ಔಷಧಿಗಳನ್ನು ಒದಗಿಸುವ ಸುಮಾರು 1 ಸಾವಿರ 'ಮುದಲ್ವಾರ್‌ ಮರುಂಧಗಂಗಲ್‌' ಔಷಧ ಅಂಗಡಿಗಳಿಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೋಮವಾರ ಇವನ್ನು ಉದ್ಘಾಟಿಸಿದರು.

 ಚೆನ್ನೈ : ಮೋದಿ ಸರ್ಕಾರದ ಜನೌಷಧಿ ರೀತಿಯಲ್ಲಿ ತಮಿಳುನಾಡಿನಾದ್ಯಂತ ಸಬ್ಸಿಡಿ ದರದಲ್ಲಿ ಜನರಿಗೆ ಔಷಧಿಗಳನ್ನು ಒದಗಿಸುವ ಸುಮಾರು 1 ಸಾವಿರ ''''ಮುದಲ್ವಾರ್‌ ಮರುಂಧಗಂಗಲ್‌'''' ಔಷಧ ಅಂಗಡಿಗಳಿಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೋಮವಾರ ಇವನ್ನು ಉದ್ಘಾಟಿಸಿದರು.

ಈ ಔಷಧಾಲಯಗಳು ಸಾರ್ವಜನಿಕರಿಗೆ ಶೇ.75ರವರೆಗೆ ರಿಯಾಯ್ತಿ ದರದಲ್ಲಿ ಔಷಧಿಗಳನ್ನು ಪೂರೈಸುತ್ತವೆ. ಅಲ್ಲದೆ, ಸುಮಾರು 1,500 ಬಿ.ಫಾರ್ಮ, ಡಿ.ಫಾರ್ಮ ಪದವಿ, ಡಿಪ್ಲೊಮಾ ಮಾಡಿದವರಿಗೆ ಉದ್ಯೋಗಾವಕಾಶವನ್ನೂ ಒದಗಿಸಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ದೀರ್ಘಕಾಲದ ವರೆಗೆ ಔಷಧಗಳ ಮೇಲೆ ಅವಲಂಬಿತರಾಗಿರುವ ಅನೇಕರಿಗೆ ಈ ಔಷಧಾಲಯಗಳಿಂದ ಅನುಕೂಲವಾಗಲಿದೆ. ಅವರಿಗೆ ಆಗುತ್ತಿದ್ದ ಹಣಕಾಸಿನ ಹೊರೆಯೂ ಕಡಿಮೆಯಾಗಲಿದೆ.

ಇಂಥ ಮೆಡಿಕಲ್‌ ಶಾಪ್‌ ನಡೆಸಲು ಫಾರ್ಮಸಿಸ್ಟ್‌ಗಳು ಹಾಗೂ ಕೋ-ಆಪರೇಟಿವ್‌ ಸೊಸೈಟಿಗಳಿಗೆ ಸರ್ಕಾರದಿಂದ ಸಬ್ಸಿಡಿ ಮತ್ತು ಹಣಕಾಸು ನೆರವು ನೀಡಲಾಗಿದೆ. ಉದ್ಯಮಿಗಳಿಗೆ 3 ಲಕ್ಷ ಹಾಗೂ ಕೋ-ಆಪರೇಟಿವ್‌ ಸೊಸೈಟಿಗಳಿಗೆ 2 ಲಕ್ಷ ಸಬ್ಸಿಡಿ ನೀಡಲಾಗಿದೆ.

ಈ ಔಷಧಾಲಯಗಳಲ್ಲಿ ಮೂರು ತಿಂಗಳಿಗಾಗುವಷ್ಟು ಔಷಧಗಳ ದಾಸ್ತಾನು ಇರುತ್ತದೆ. ಅಲ್ಲದೆ, ರಾಜ್ಯದ ಎಲ್ಲ 38 ಜಿಲ್ಲೆಗಳಲ್ಲೂ ಔಷಧ ಉಗ್ರಾಣಗಳನ್ನು ಸ್ಥಾಪಿಸಲಾಗಿದೆ ಎಂದು ಸ್ಟಾಲಿನ್‌ ಮಾಹಿತಿ ನೀಡಿದರು.

ಜನೌಷಧಿಗೂ, ತ.ನಾಡು ಫಾರ್ಮಸಿಗೂ ವ್ಯತ್ಯಾಸವೇನು?

ಜನೌಷಧಿ ಕೇಂದ್ರಗಳಲ್ಲಿ ಪ್ರಮುಖ ಔಷಧಗಳ ಜನರಿಕ್‌ ಬ್ರಾಂಡ್‌ ಔಷಧಿಗಳು ಕಡಿಮೆ ದರದಲ್ಲಿ ಸಿಗುತ್ತಿದ್ದರೆ, ಇಲ್ಲಿ ಎಲ್ಲಾ ರೀತಿಯ ಔಷಧಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ.