ಸಾರಾಂಶ
ತುಮಕೂರು : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಡಿಸೆಂಬರ್ 2 ರಂದು ನಡೆಯಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮ ಯಾವುದೇ ಲೋಪವಾಗದಂತೆ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿದರು.
ಜಿಲ್ಲಾಧಿಕಾರಿ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜರುಗಿದ ಪೂರ್ವಭಾವಿ ಸಭೆಯಲ್ಲಿ ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿಬರಬೇಕು. ಸವಲತ್ತು ವಿತರಣೆಗೆ ಸಂಬಂಧಿಸಿದಂತೆ ಆಯ್ಕೆಯಾದ ಫಲಾನುಭವಿಗಳನ್ನು ಕಾರ್ಯಕ್ರಮದ ಸ್ಥಳಕ್ಕೆ ಜೋಪಾನವಾಗಿ ಕರೆತಂದು ಕಾರ್ಯಕ್ರಮ ಮುಗಿದ ನಂತರ ಅವರನ್ನು ಸ್ವಸ್ಥಳಕ್ಕೆ ಹಿಂದಿರುಗಿಸುವ ಹೊಣೆಯನ್ನು ಆಯಾ ತಾಲ್ಲೂಕಿನ ನೋಡಲ್ ಅಧಿಕಾರಿಗಳು ನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು.
ವಿವಿಧ ತಾಲೂಕುಗಳಿಂದ ಆಗಮಿಸುವ ಫಲಾನುಭವಿಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ, ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರಲ್ಲದೆ, ಕಾರ್ಯಕ್ರಮದ ದಿನ ವಾಹನ ದಟ್ಟಣೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು ತಮ್ಮ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಅಧಿಕಾರಿಗಳ ಮಾಹಿತಿಗಾಗಿ ವಾಹನ ಸಂಚರಿಸುವ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕುರಿತು ನಕಾಶೆ ಸಿದ್ಧಪಡಿಸಲಾಗಿದೆ. ತಾಲ್ಲೂಕುಗಳಿಂದ ಫಲಾನುಭವಿಗಳನ್ನು ಕರೆತರುವ ವಾಹನಗಳನ್ನು ನಕಾಶೆಯಲ್ಲಿ ತೋರಿಸಿರುವಂತೆ ನಿಗಧಿಪಡಿಸಿರುವ ಪಾರ್ಕಿಂಗ್ ಜಾಗದಲ್ಲಿಯೇ ನಿಲುಗಡೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಎಸ್.ಎಸ್.ಸರ್ಕಲ್‌ನಿಂದ ಕೆಇಬಿ ಸರ್ಕಲ್‌ವರೆಗೆ(ಎಡರಸ್ತೆಯಲ್ಲಿ ಮಾತ್ರ), ಕೆಇಬಿ ಸರ್ಕಲ್‌ನಿಂದ ಡಿ.ಸಿ.ಕಚೇರಿವರೆಗೆ(ಎಡ ರಸ್ತೆಯಲ್ಲಿ ಮಾತ್ರ), ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ(ಹೆಲ್ತ್ ಕ್ಯಾಂಟೀನ್ ರಸ್ತೆ), ಗುಬ್ಬಿ ವೀರಣ್ಣ ಕಲಾಕ್ಷೇತ್ರದ ರಸ್ತೆ, ಶಿರಾಗೇಟ್ 80ಅಡಿ ರಸ್ತೆ, ಉಪ್ಪಾರಹಳ್ಳಿ ಸೋಮೇಶ್ವರ ಶಾಲೆಯ ಆವರಣ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಲಘು ಮೋಟಾರು ವಾಹನ(ಎಲ್‌ಎಂವಿ)ಗಳಿಗಾಗಿ ನಗರದ ಬಿಷಪ್ ಸಾರ್ಜೆಂಟ್ ಶಾಲೆ ಮೈದಾನ, ಸಿದ್ಧಗಂಗಾ ಎಲಿಮೆಂಟರಿ ಶಾಲೆ ಮೈದಾನ, ರೈಲ್ವೆ ಸ್ಟೇಷನ್ ರಸ್ತೆ ಹಾಗೂ ಸಿ.ಎಸ್.ಐ. ಲೇಔಟ್ ರಸ್ತೆಯಲ್ಲಿ(ಬಿಷಪ್ ಸಾರ್ಜೆಂಟ್ ಶಾಲೆಯವರೆಗೆ) ಪಾರ್ಕಿಂಗ್ ವ್ಯವಸ್ಥೆ ಹಾಗೂ ದ್ವಿಚಕ್ರ ವಾಹನಗಳಿಗಾಗಿ ಚಾಮುಂಡೇಶ್ವರಿ ದೇವಸ್ಥಾನದ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಜಿ. ಪ್ರಭು ಮಾತನಾಡಿ, ಕಾರ್ಯಕ್ರಮಕ್ಕೆ ವಿವಿಧ ತಾಲ್ಲೂಕುಗಳಿಂದ ಸುಮಾರು 1 ಲಕ್ಷ ಫಲಾನುಭವಿಗಳು ಬರುವ ನಿರೀಕ್ಷೆಯಿದ್ದು, ಆಯಾ ತಾಲ್ಲೂಕಿನ ನೋಡಲ್ ಅಧಿಕಾರಿಗಳು ಫಲಾನುಭವಿಗಳನ್ನು ಕರೆ ತರುವ ಸಾರಿಗೆ ವಾಹನದ ಸಂಖ್ಯೆ, ಚಾಲಕರು ಹಾಗೂ ಅವರ ಮೊಬೈಲ್ ಸಂಖ್ಯೆಯ ಪಟ್ಟಿಯನ್ನು ಹೊಂದಿರಬೇಕು. ಫಲಾನುಭವಿಗಳನ್ನು ವೇದಿಕೆ ಸ್ಥಳಕ್ಕೆ ಬೆಳಿಗ್ಗೆ 9.30 ಗಂಟೆಯೊಳಗಾಗಿ ಕರೆತರಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ರಾಜೇಶ್ವರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.