ಸಾರಾಂಶ
ನವದೆಹಲಿ: ಕರಾವಳಿ ಕಾವಲು ಪಡೆಯ ಡಿಜಿ ರಾಕೇಶ್ ಪಾಲ್ ಚೆನ್ನೈನಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.
ಪಾಲ್, ಶನಿವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಜನ್ಮ ಶತಮಾನೋತ್ಸವದ ನಾಣ್ಯ ಬಿಡುಗಡೆ ಸಂದರ್ಭದಲ್ಲಿ ಭಾಗಿಯಾಗಿದ್ದರು. ಆ ಬಳಿಕ ಆರೋಗ್ಯದಲ್ಲಿ ವ್ಯತ್ಯಯವಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ,. ಕರಾವಳಿ ಕಾವಲು ಪಡೆಯಲ್ಲಿ ಸುಮಾರು 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಕಳೆದ ವರ್ಷ ಜುಲೈ 19ರಂದು ಕರಾವಳಿ ಕಾವಲು ಪಡೆಯ 25 ನೇ ಡಿಜಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
==
ಕಾಶ್ಮೀರ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಪೂರ್ವಮೈತ್ರಿಯಿಲ್ಲ: ಬಿಜೆಪಿ
ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ಯಾವುದೇ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ಭಾನುವಾರ ಹೇಳಿದೆ.
ಈ ಕುರಿತು ಮಾಹಿತಿ ನೀಡಿದ ರಾಜ್ಯಾಧ್ಯಕ್ಷ ರವೀಂದರ್ ರೈನಾ, ಈ ವಿಧಾನಸಭಾ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ. ಅದರ ಬದಲಾಗಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ 8ರಿಂದ 10 ಸ್ವತಂತ್ರ್ಯ ಅಭ್ಯರ್ಥಿಗಳ ಜತೆ ಮಾತುಕತೆ ನಡೆಸುತ್ತಿದ್ದು, ಈ ಚರ್ಚೆಗಳು ಸಾಕಾರಗೊಂಡರೆ ಜಂಟಿಯಾಗಿ ಚುನಾವಣೆ ಎದುರಿಸಲು ಕಾರ್ಯತಂತ್ರ ರೂಪಿಸುತ್ತೇವೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಸೆ.18ರಿಂದ 3 ಹಂತದಲ್ಲಿ ಚುನಾವಣೆ ನಡೆಯಲಿದೆ.
==
ನಟ ಮೋಹನ್‌ಲಾಲ್‌ಗೆ ಉಸಿರಾಟದ ತೊಂದರೆ ಆಸ್ಪತ್ರೆ ದಾಖಲು, ಬಿಡುಗಡೆ
ತಿರುವನಂತಪುರ: ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೆ ತೀವ್ರ ಜ್ವರ, ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮೋಹನ್‌ಲಾಲ್ ತೀವ್ರ ಜ್ವರ, ಉಸಿರಾಟ ತೊಂದರೆ ಮತ್ತು ಸ್ನಾಯು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕೊಚ್ಚಿಯ ಅಮೃತಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿತ್ತು. ಅಗತ್ಯ ಚಿಕಿತ್ಸೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಅವರಿಗೆ ವೈದ್ಯರು 5 ದಿನಗಳ ವಿಶ್ರಾಂತಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
==
ಹಾಸಿಗೆ ಕೆಳಗೆ ಬಾಂಬ್ ಇದೆ: ರಾಜಸ್ಥಾನದ ಹಲವು ಆಸ್ಪತ್ರೆಗೆ ಬಾಂಬ್ ಬೆದರಿಕೆ ಸಂದೇಶ
ಜೈಪುರ: ದೇಶದಲ್ಲಿ ಹುಸಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿದ್ದು, ಶಾಲೆ, ಮಾಲ್, ವಿಮಾನ ನಿಲ್ದಾಣಗಳ ಬಳಿಕ ಆಸ್ಪತ್ರೆಗೆ ಬೆದರಿಕೆ ಕರೆ ಬಂದಿದೆ. ಭಾನುವಾರ ರಾಜಸ್ಥಾನದ ಹಲವು ಆಸ್ಪತ್ರೆಗಳಲ್ಲಿ ‘ಹಾಸಿಗೆ ಕೆಳಗೆ ಮತ್ತು ಶೌಚಾಲಯದಲ್ಲಿ ಬಾಂಬ್ ಇರಿಸಲಾಗಿದೆ. ಇದರ ಹಿಂದೆ ಚಿಂಗ್ ಮತ್ತು ಕಲ್ಟಿಸ್ಟ್ ಉಗ್ರರ ಕೈವಾಡವಿದೆ ’ ಕಿಡಿಗೇಡಿಗಳು ಇ ಮೇಲ್ ಸಂದೇಶ ಕಳುಹಿಸಿದ್ದಾರೆ.
ಬಳಿಕ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ಸಿಬ್ಬಂದಿ ಸ್ಥಳವನ್ನು ಕೂಲಂಕಷ ಪರಿಶೀಲನೆಗೆ ಒಳಪಡಿಸಿ ಹುಸಿ ಬಾಂಬ್ ಬೆದರಿಕೆ ಎಂದು ಖಾತ್ರಿಪಡಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಶನಿವಾರವೂ ಸಹ ನವೀ ಮುಂಬೈ, ಗುರುಗ್ರಾಮ ಮತ್ತು ನೋಯ್ಡಾದಲ್ಲಿನ ಮೂರು ಮಾಲ್‌ಗಳಿಗೆ ಬೆದರಿಕೆ ಬಂದಿತ್ತು. ಅದರಲ್ಲಿ ‘ನೀವು ಯಾರೂ ಬದುಕುವುದಿಲ್ಲ, ಎಲ್ಲರೂ ಸಾಯಲು ಯೋಗ್ಯರು’ ಎಂದು ಕಿಡಿಗೇಡಿಗಳು ಸಂದೇಶ ಕಳುಹಿಸಿದ್ದರು.