ಸಾರಾಂಶ
ಅಮೆರಿಕದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಕಾಗ್ನಿಜೆಂಟ್, ಇತ್ತೀಚೆಗೆ ಹೊಸ ಟೆಕ್ಕಿಗಳಿಗೆ ನೀಡಿದ ಉದ್ಯೋಗದ ಆಫರ್ ಮತ್ತು ಅದಕ್ಕೆ ನೀಡಿದ ವೇತನ ಪ್ರಮಾಣದ ಕಾರಣಕ್ಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನವದೆಹಲಿ: ಅಮೆರಿಕದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಕಾಗ್ನಿಜೆಂಟ್, ಇತ್ತೀಚೆಗೆ ಹೊಸ ಟೆಕ್ಕಿಗಳಿಗೆ ನೀಡಿದ ಉದ್ಯೋಗದ ಆಫರ್ ಮತ್ತು ಅದಕ್ಕೆ ನೀಡಿದ ವೇತನ ಪ್ರಮಾಣದ ಕಾರಣಕ್ಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಂಪನಿಯಲ್ಲಿ ಕೆಲ ಉದ್ಯೋಗಳಿಗೆ ಹೊಸ ಟೆಕ್ಕಿಗಳಿಂದ ಅರ್ಜಿ ಆಹ್ವಾನಿಸಿದ್ದ ಕಂಪನಿ ವಾರ್ಷಿಕ 2.52 ಲಕ್ಷ ರು. ವೇತನ ನೀಡುವುದಾಗಿ ಹೇಳಿತ್ತು. ಅಂದರೆ ಮಾಸಿಕ ಕೇವಲ 21000 ರುಪಾಯಿ ಮಾತ್ರ. ಇದು ಐಟಿ ವಲಯದ 10 ವರ್ಷದ ಕನಿಷ್ಠ ಸಂಬಳ ಎಂದು ಹೇಳಲಾಗಿದೆ.ಈ ಜಾಹೀರಾತು ಪ್ರಕಟವಾದ ಕೆಲ ಹೊತ್ತಿನಲ್ಲೇ ಅದು 15 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು ಮಾತ್ರವಲ್ಲದೇ ನಾನಾ ರೀತಿಯ ಪ್ರತಿಕ್ರಿಯೆಗೂ ಕಾರಣವಾಗಿದೆ. ಅತ್ಯಂತ ಸ್ಪರ್ಧಾತ್ಮಕವಾದ ಟೆಕ್ ವಲಯದಲ್ಲಿ ಇಷ್ಟೊಂದು ಕಡಿಮೆ ವೇತನದ ಆಫರ್ ನೀಡಿದ್ದರ ಬಗ್ಗೆ ಟೆಕ್ಕಿಗಳು ಕಿಡಿಕಾರಿದ್ದಾರೆ.
ವ್ಯಂಗ್ಯದ ಟೀಕೆ: ಈ ಬಗ್ಗೆ ವ್ಯಕ್ತಿಯೊಬ್ಬರು, ‘ಇದು ಭಾರೀ ಉದಾರ ವೇತನದ ಆಫರ್. ಪದವೀಧರರು ಇಷ್ಟೊಂದು ಹಣ ಇಟ್ಟುಕೊಂಡು ಏನು ಮಾಡುತ್ತಾರೆ?’ ಎಂದು ವ್ಯಂಗ್ಯವಾಡಿದ್ದರೆ, ಮತ್ತೊಬ್ಬರು ‘2002ನೇ ಬ್ಯಾಚ್‌ನ ಟೆಕ್ಕಿಗಳಿಗೇ ಈ ಮೊತ್ತ ಆಫರ್ ಮಾಡಲಾಗಿತ್ತು. ಈ ಮೊತ್ತದಲ್ಲಿ ಪಿಎಫ್ ಕಳೆದರೆ ಉಳಿವ 19000 ರು.ನಲ್ಲಿ ಮೆಟ್ರೋ ನಗರದಲ್ಲಿ ಜೀವನ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.ಇನ್ನೊಬ್ಬರು, ಈ ಹಣದಲ್ಲಿ ಹಳ್ಳಿಯೊಂದರಲ್ಲಿ ಬಾಡಿಗೆ ಮನೆಗೆ ಹಣ ಮತ್ತು ಒಂದಿಷ್ಟು ಮ್ಯಾಗಿ ಪ್ಯಾಕೇಟ್ ಖರೀದಿಸಬಹುದಷ್ಟೇ ಎಂದಿದ್ದಾರೆ. ಮಗದೊಬ್ಬರು,‘ಟೀ ಮತ್ತು ಭರವಸೆಯಲ್ಲೇ ಜೀವನ ಸಾಗಿಸಬಹುದೇ ಎಂಬುದರ ಬಗ್ಗೆ ಕಾಗ್ನಿಜೆಂಟ್ ಪ್ರಯೋಗ ನಡೆಸುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.