ಬಾಂಬ್‌ ಹೇಳಿಕೆ ಸಚಿವೆ ಶೋಭಾ ವಿರುದ್ಧ ಕ್ರಮಕ್ಕೆ ಆಯೋಗ ಸೂಚನೆ

| Published : Mar 21 2024, 01:06 AM IST / Updated: Mar 21 2024, 09:04 AM IST

Shobha Karandlaje
ಬಾಂಬ್‌ ಹೇಳಿಕೆ ಸಚಿವೆ ಶೋಭಾ ವಿರುದ್ಧ ಕ್ರಮಕ್ಕೆ ಆಯೋಗ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಡಿಎಂಕೆ ಸಲ್ಲಿಸಿರುವ ದೂರು ಧರಿಸಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ವಿರುದ್ಧ ತಕ್ಷಣದ ಮತ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.

ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಡಿಎಂಕೆ ಸಲ್ಲಿಸಿರುವ ದೂರು ಧರಿಸಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ವಿರುದ್ಧ ತಕ್ಷಣದ ಮತ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.ಈ ಕುರಿತು ಅದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ಸೂಚಿಸಿದೆ. 

ಅಲ್ಲದೆ ಕ್ರಮ ಕೈಗೊಂಡ ವರದಿ ಬಗ್ಗೆ 48 ಗಂಟೆಗಳಲ್ಲಿ ವರದಿ ಸಲ್ಲಿಸುವಂತೆಯೂ ಆದೇಶಿಸಿದೆ. ಇದು ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಕ್ರಮಕ್ಕೆ ಆದೇಶಿಸಲಾದ ಮೊದಲ ಪ್ರಕರಣ ಎನ್ನಲಾಗಿದೆ.

ಡಿಎಂಕೆ ದೂರು: ಇದಕ್ಕೂ ಮೊದಲು ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಂಗಳವಾರ ಆಡಿದ ಮಾತುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಡಿಎಂಕೆ ದೂರು ನೀಡಿತ್ತು.

ದೂರಿನಲ್ಲಿ ‘ಸಚಿವೆ ಶೋಭಾ ನೀಡಿದ ಹೇಳಿಕೆ ತಮಿಳರು ಮತ್ತು ಕನ್ನಡಿಗರ ನಡುವೆ ದ್ವೇಷ ಹುಟ್ಟುಹಾಕುವಂತಿದೆ. ಚುನಾವಣೆ ಹೊತ್ತಿನಲ್ಲಿ ಇಂಥ ಹೇಳಿಕೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯೂ ಹೌದು. ಹೇಳಿಕೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಿದೆ. 

ಕರ್ನಾಟಕದ ಜನತೆ ತಮಿಳುನಾಡಿನ ಜನರ ಮೇಲೆ ಪ್ರತಿಕಾರ ಕೈಗೊಳ್ಳಲು ಪ್ರಚೋದನೆ ಕೂಡಾ ನೀಡಬಹುದು. ಇಂಥದ್ದೊಂದು ಹೇಳಿಕೆ ಮೂಲಕ ತಮಿಳುನಾಡಿನ ಜನರೆಲ್ಲಾ ತೀವ್ರವಾದಿಗಳು ಎನ್ನುವ ರೀತಿಯಲ್ಲಿ ಬಿಂಬಿಸಲಾಗಿದೆ. 

ಹೀಗಾಗಿ ಹೇಳಿಕೆ ಸಂಬಂಧ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು’ ಒತ್ತಾಯಿಸಿತ್ತು.

ಶೋಭಾ ಏನು ಹೇಳಿದ್ದರು?
ಬೆಂಗಳೂರಿನ ನಗರ್ತಪೇಟೆಯಲ್ಲಿ ಹಿಂದೂ ಯುವಕನ ಮೇಲೆ ದಾಳಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಂಗಳವಾರ ಭಾಗಿಯಾಗಿದ್ದ ಸಚಿವೆ ಶೋಭಾ, ‘ಯಾರೋ ತಮಿಳುನಾಡಿನಿಂದ ತರಬೇತಿ ಪಡೆದು ಬಂದು ಇಲ್ಲಿ ಬಾಂಬ್‌ ಇಡ್ತಾರೆ’ ಎಂದಿದ್ದರು. 

ಈ ಬಗ್ಗೆ ಸೋಮವಾರವೇ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಆಕ್ಷೇಪ ವ್ಯಕ್ತಪಡಿಸಿದ್ದರು, ಇಂಥ ಹೇಳಿಕೆ ನೀಡಲು ಅವರು ಒಂದೋ ಎನ್‌ಐಎ ಅಧಿಕಾರಿಯಾಗಿರಬೇಕು ಇಲ್ಲವೇ ರಾಮೇಶ್ವರಂ ಕೆಫೆಯವರಾಗಿರಬೇಕು. ಇಲ್ಲದೇ ಹೋದಲ್ಲಿ ಅವರು ಇಂಥ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದರು.