ಸಾರಾಂಶ
ಕೌಶಲ್ಯ ರಹಿತ ಕಾರ್ಮಿಕನಾಗಿ ದಿನಕ್ಕೆ 400 ರು. ದುಡಿಯಬಹುದು. ಆದ್ದರಿಂದ ಕೂಲಿ ಮಾಡಿಯಾದರೂ ಪತ್ನಿಗೆ ಜೀವನಾಂಶ ನೀಡಲೇಬೇಕು ಎಂದು 2016ರ ವಿಚ್ಛೇದನ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.
ಲಖನೌ: ವಿಚ್ಛೇದಿತ ಪತಿಯು ಯಾವುದೇ ನೆಪವೊಡ್ಡದೆ ತನ್ನ ಪತ್ನಿಗೆ ಕೂಲಿ ಮಾಡಿಯಾದರೂ ಜೀವನಾಂಶ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.
ವಿಚ್ಛೇದಿತೆಗೆ ಜೀವನಾಂಶ ನೀಡುವಂತೆ ಕುಟುಂಬ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಪತಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ರೇಣು ಅಗರ್ವಾಲ್ ಅವರಿದ್ದ ಪೀಠ, ‘ಪತಿಗೆ ಯಾವುದೇ ಕೆಲಸ ಇಲ್ಲಿದಿದ್ದರೂ, ಆತ ಆರೋಗ್ಯವಂತ ವ್ಯಕ್ತಿಯಾಗಿದ್ದರೆ, ಕೌಶಲ್ಯ ರಹಿತ ಕಾರ್ಮಿಕನಾಗಿ ದಿನಕ್ಕೆ 300-400 ರು.ಗಳನ್ನು ದುಡಿಯುವ ಸಾಮರ್ಥ್ಯ ಹೊಂದಿರುತ್ತಾನೆ. ಹೀಗಾಗಿ ವಿಚ್ಛೇದಿತ ಪತ್ನಿಗೆ ಯಾವುದೇ ನೆಪ ಹೇಳದೆ, ಕೂಲಿ ಮಾಡಿಯಾದರೂ ಜೀವನಾಂಶ ನೀಡಬೇಕು’ ಎಂದು ಸೂಚಿಸಿತು.ಪ್ರಕರಣ ಹಿನ್ನೆಲೆ:2015ರಲ್ಲಿ ವಿವಾಹವಾಗಿದ್ದ ದಂಪತಿಗಳು 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಈ ವೇಳೆ ಪತ್ನಿ ವರದಕ್ಷಿಣೆ ಪ್ರಕರಣ ದಾಖಲಿಸಿದ್ದರು. ಈ ದೂರಿಗೆ ಪತಿ ತಾನೂ ಬಡವ, ಕೆಲಸ ಇಲ್ಲ, ಕೃಷಿಯಲ್ಲಿ ಕೆಲ ಸಂಪಾದನೆ ಮಾಡುತ್ತಿದ್ದೇನೆ. ಪೋಷಕರು ಹಾಗೂ ಸೋದರಿಯನ್ನು ನೋಡಿಕೊಳ್ಳಬೇಕು ಎಂದು ನ್ಯಾಯಾಲಯಕ್ಕೆ ಹೇಳಿದ್ದ. ಜೊತೆಗೆ ಪತ್ನಿ ತಿಂಗಳಿಗೆ 10,000 ರು. ಸಂಪಾದಿಸುತ್ತಿದ್ದಾಳೆ. ಆದರೆ ತನಗೆ ಅಷ್ಟು ಆದಾಯವಿಲ್ಲ ಎಂದು ಹೇಳಿದ್ದರು.ಆದರೆ ಈ ಹೇಳಿಕೆಗಳಿಗೆ ಪತಿ ದಾಖಲೆಗಳನ್ನು ಒದಗಿಸಲು ಆಗದ ಕಾರಣ ಕುಟುಂಬ ನ್ಯಾಯಾಲಯ ವಿಚ್ಛೇದಿತ ಪತ್ನಿಗೆ ತಿಂಗಳಿಗೆ 10,000 ರು. ನೀಡಬೇಕು ಎಂದು ತೀರ್ಪು ನೀಡಿತ್ತು.