ಸಾರಾಂಶ
ಗುರುವಾರ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಗಲಿಕೆಗೆ ವಿದೇಶದಲ್ಲಿಯೂ ಸಂತಾಪ ವ್ಯಕ್ತವಾಗಿದೆ. ಅಮೆರಿಕ, ಚೀನಾ, ಬ್ರಿಟನ್, ಕೆನಡಾ, ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳ ರಾಜಕೀಯ ನಾಯಕರು ಕಂಬನಿ ಮಿಡಿದ್ದಾರೆ.
ನವದೆಹಲಿ: ಗುರುವಾರ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಗಲಿಕೆಗೆ ವಿದೇಶದಲ್ಲಿಯೂ ಸಂತಾಪ ವ್ಯಕ್ತವಾಗಿದೆ. ಅಮೆರಿಕ, ಚೀನಾ, ಬ್ರಿಟನ್, ಕೆನಡಾ, ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳ ರಾಜಕೀಯ ನಾಯಕರು ಕಂಬನಿ ಮಿಡಿದ್ದಾರೆ.ಸಿಂಗ್ ನಿಧನಕ್ಕೆ ನೆರೆಯ ರಾಷ್ಟ್ರಗಳಾದ ನೇಪಾಳ, ಮಾಲ್ಡೀವ್ಸ್, ಅಫ್ಘಾನಿಸ್ತಾನ, ಶ್ರೀಲಂಕಾ ದೇಶಗಳು ತೀವ್ರ ಸಂತಾಪವನ್ನು ಸೂಚಿಸಿದ್ದು, ಭಾರತದ ಜೊತೆಗಿನ ಸ್ನೇಹ ವೃದ್ಧಿಗೆ ಅವರ ಕೊಡುಗೆಯನ್ನು ಕೊಂಡಾಡಿದ್ದಾರೆ.
ಡಾ। ಸಿಂಗ್ ಚಾಂಪಿಯನ್- ಅಮೆರಿಕ ಬಣ್ಣನೆ: ಸಿಂಗ್ ಅವರನ್ನು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ‘ದ್ವಿಪಕ್ಷೀಯ ಕಾರ್ಯತಂತ್ರದ ಶ್ರೇಷ್ಠ ಚಾಂಪಿಯನ್’ ಎಂದು ಬಣ್ಣಿಸಿದ್ದಾರೆ. ‘ಡಾ.ಸಿಂಗ್ ಅಮೆರಿಕ ಮತ್ತು ಭಾರತದ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಶ್ರೇಷ್ಠ ಚಾಂಪಿಯನ್. ಅವರ ಕೆಲಸಗಳು ಎರಡು ದಶಕಗಳಿಂದ ಎರಡು ದೇಶಗಳು ಒಟ್ಟಿಗೆ ಸಾಗಲು ಅಡಿಪಾಯ ಹಾಕಿತು. ಭಾರತದ ಅಭಿವೃದ್ಧಿ ಮತ್ತು ಆರ್ಥಿಕ ಸುಧಾರಣೆಗೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ’ ಎಂದಿದ್ದಾರೆ.
ಶ್ರೇಷ್ಠ ವ್ಯಕ್ತಿ- ಮ್ಯಾಕ್ರಾನ್: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಸಂತಾಪ ಸೂಚಿಸಿದ್ದು. ‘ ಭಾರತವು ಒಬ್ಬ ಶ್ರೇಷ್ಠ ವ್ಯಕ್ತಿಯನ್ನು, ಫ್ರಾನ್ಸ್ ನೈಜ ಸ್ನೇಹಿತನನ್ನು ಕಳೆದುಕೊಂಡಿದೆ. ಅವರು ಭಾರತಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು’ ಎಂದು ಹೇಳಿದ್ದಾರೆ.
ಅಸಾಧಾರಣ ಬುದ್ಧಿವಂತ- ಹಾರ್ಪರ್: ಇನ್ನು ಕೆನಡಾದ ಮಾಜಿ ಪ್ರಧಾನಿ ಸ್ಫೀಫನ್ ಹಾರ್ಪರ್ ಸಿಂಗ್ ಸಾವಿಗೆ ಕಂಬನಿ ಮಿಡಿದಿದ್ದು, ‘ಅವರು ಅಸಾಧಾರಣ ಬುದ್ಧಿವಂತಿಕೆ, ಸಮಗ್ರತೆಯ ವ್ಯಕ್ತಿಯಾಗಿದ್ದರು’ ಎಂದಿದ್ದಾರೆ. ನೆರೆಯ ರಾಷ್ಟ್ರ ನೇಪಾಳದ ಮಾಜಿ ಅಧ್ಯಕ್ಷ ಪುಷ್ಪ ಕಮಲ್ ದಹಲ್ ಕೂಡ ಸಂತಾಪ ಸೂಚಿಸಿದ್ದು, ‘ದೂರದೃಷ್ಟಿಯುಳ್ಳ ನಾಯಕ. ಅದ್ಭುತ ಆಡಳಿತಗಾರ. ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಅವರ ಪರಂಪರೆಯು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ’ ಎಂದಿದ್ದಾರೆ.
ಉದಾರೀಕರಣದ ಶಿಲ್ಪಿ- ರಾಜಪಕ್ಸೆ: ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹೀಂದ ರಾಜಪಕ್ಸೆ ಮಾತನಾಡಿ, ‘ದೂರದೃಷ್ಟಿಯ ಅರ್ಥಶಾಸ್ತ್ರಜ್ಞ ಮತ್ತು ಭಾರತದ ಆರ್ಥಿಕ ಉದಾರೀಕರಣದ ಶಿಲ್ಪಿ. ಅವರ ಕೊಡುಗೆಗಳು ಭಾರತಕ್ಕೆ ಹೊಸ ಯುಗವನ್ನು ರೂಪಿಸಿವೆ’ ಎಂದಿದ್ದಾರೆ. ಚೀನಾ ಕೂಡ ಸಿಂಗ್ ಸಾವಿಗೆ ಕಂಬನಿ ಮಿಡಿದಿದೆ.
ಪಾಕ್ ಮಾಜಿ ಸಚಿವ ಗುಣಗಾನ:
ಡಾ.ಸಿಂಗ್ ಅವರು ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗೆ ತಮ್ಮನ್ನು ತಾವು ಮುಡಿಪಾಗಿಟ್ಟ ವ್ಯಕ್ತಿಯಾಗಿದ್ದರು .ಇಡೀ ಸಾರ್ಕ್ ಪ್ರದೇಶದಲ್ಲಿ ಸೌಹಾರ್ದಯುತ ವಾತಾವರಣವನ್ನು ಸೃಷ್ಟಿಸಿದ ಕೀರ್ತಿ ಸಿಂಗ್ ಅವರಿಗೆ ಸಲ್ಲುತ್ತದೆ. ಅಮೃತಸರದಲ್ಲಿ ಬೆಳಗಿನ ಉಪಾಹಾರ, ಲಾಹೋರ್‌ನಲ್ಲಿ ಊಟ ಮತ್ತು ಕಾಬೂಲ್‌ನಲ್ಲಿ ರಾತ್ರಿಯ ಭೋಜನವನ್ನು ಹೊಂದಲು ಸಾಧ್ಯವಾಗುವ ದಿನವನ್ನು ಅವರು ಎದುರು ನೋಡುತ್ತಿದ್ದರು’ ಎಂದು ಪಾಕ್ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮೆಹಮೂದ್ ಕಸೂರಿ ಹೇಳಿದ್ದಾರೆ.
ಚೀನಾದಿಂದಲೂ ಸ್ಮರಣೆ:
ಭಾರತ ಮತ್ತು ಚೀನಾದ ನಡುವಿನ ಸಕಾರಾತ್ಮಕ ಸಂಬಂಧ ವೃದ್ಧಿಗೆ ಸಿಂಗ್ ನೀಡಿದ ಕೊಡುಗೆಯನ್ನು ಚೀನಾ ಸರ್ಕಾರ ಸ್ಮರಿಸಿದೆ.
ಲಂಡನ್ ಮಾಧ್ಯಮಗಳಲ್ಲಿಯೂ ಸಂತಾಪ :
ಮನಮೋಹನ್ ಸಿಂಗ್ ಅವರ ಸಾವಿಗೆ ಬ್ರಿಟನ್ ಮಾಧ್ಯಮಗಳಲ್ಲಿಯೂ ಸಂತಾಪ ವ್ಯಕ್ತವಾಗಿದೆ. ಬಿಬಿಸಿ ಸುದ್ದಿ ಸಂಸ್ಥೆಯು ಭಾರತದ ಆರ್ಥಿಕತೆಯ ವಾಸ್ತುಶಿಲ್ಪಿ ಎಂದು ಸಿಂಗ್ ಅವರನ್ನು ಬಣ್ಣಿಸಿದೆ. ಬ್ರಿಟನ್‌ನ ಹಲವು ನಾಯಕರು ಕೂಡ ಸಿಂಗ್ ಆರ್ಥಿಕ ನೀತಿಗಳನ್ನು ಹಾಡಿ ಹೊಗಳಿದ್ದಾರೆ.