ಸಾರಾಂಶ
ನವದೆಹಲಿ: ಆಡಳಿತಾರೂಢ ಎನ್‌ಡಿಎ ಕೂಟಕ್ಕೆ ಸೇರಿದ ಕೆಲ ನಾಯಕರು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ನೀಡಿದ ಹೇಳಿಕೆ ವಿರುದ್ಧ ಇಲ್ಲಿನ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ದೂರು ದಾಖಲಿಸಿದೆ.
ವಿಪಕ್ಷ ನಾಯಕರ ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಇಂತಹ ಹೇಳಿಕೆ ನೀಡಲಾಗಿದೆ. ಇದು ಜಮ್ಮು ಕಾಶ್ಮೀರ ಮತ್ತು ಹರ್ಯಾಣ ಚುನಾವಣೆ ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ಶಾಂತಿ ಕದಡುವ ಉದ್ದೇಶ ಹೊಂದಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ದೂರಿನಲ್ಲಿ ಆರೋಪಿಸಿದ್ದಾರೆ. ಬಿಜೆಪಿ ನಾಯಕರ ಹೇಳಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರವಷ್ಟೇ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಇದೀಗ ದೂರು ದಾಖಲಾಗಿದೆ.
ಬಿಜೆಪಿ ಮತ್ತು ಶಿವಸೇನೆಯ ನಾಯಕರು ರಾಹುಲ್ ಗಾಂಧಿಯನ್ನು ಭಯೋತ್ಪಾದಕ, ಅವರ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ನೀಡುವುದಾಗಿ ಹೇಳಿಕೆ ನೀಡಿದ್ದರು. ಮತ್ತೊಬ್ಬರು ರಾಹುಲ್ ಬಾಯಿಗೆ ಹೊಲಿಗೆ ಹಾಕಬೇಕು ಎಂದಿದ್ದರು.
===
ಕೈ ನಾಯಿಗಳ ಸಮಾಧಿ ಮಾಡುತ್ತೇನೆ: ಶಿವಸೇನಾ ಶಾಸಕನ ಕೀಳು ಹೇಳಿಕೆಮುಂಬೈ: ಮೀಸಲು ರದ್ದುಪಡಿಸುವ ಕುರಿತು ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಾಲಗೆಯನ್ನು ಕತ್ತರಿಸಿದವರಿಗೆ 11 ಲಕ್ಷ ರು. ಬಹುಮಾನ ನೀಡುವೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಶಿವಸೇನೆ (ಶಿಂಧೆ ಬಣ) ಶಾಸಕ ಸಂಜಯ್ ಗಾಯಕ್ವಾಡ್ ಇದೀಗ ‘ಕಾಂಗ್ರೆಸ್ ನಾಯಿಗಳನ್ನು ಸಮಾಧಿ ಮಾಡುತ್ತೇನೆ’ ಎಂದು ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭಾಗವಹಿಸುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಿಗಳು ಯಾವಾದರೂ ಉದ್ದೇಶ ಪೂರ್ವಕವಾಗಿ ಆಗಮಿಸಲು ಪ್ರಯತ್ನಿಸಿದರೆ ನಾನು ಅವರನ್ನು ಅಲ್ಲಿಯೇ ಸಮಾಧಿ ಮಾಡುತ್ತೇನೆ ಎಂದು ಗಾಯಕ್ವಾಡ್ ಕಿಡಿಕಾರಿದ್ದಾರೆ.
===
ಮೀಸಲು ರದ್ದು ಎಂದ ರಾಹುಲ್ ಬಾಯಿಗೆ ಹೊಲಿಗೆ ಹಾಕಬೇಕು: ಬಿಜೆಪಿ ಸಂಸದ ಅನಿಲ್‌ಅಮರಾವತಿ: ‘ಮೀಸಲಾತಿ ವಿರುದ್ಧ ವಿದೇಶದಲ್ಲಿ ರಾಹುಲ್ ನೀಡಿರುವ ಹೇಳಿಕೆ ಅಪಾಯಕಾರಿ. ರಾಹುಲ್ ಗಾಂಧಿ ನಾಲಗೆಯನ್ನು ಕತ್ತರಿಸುವ ಬದಲು, ಹೊಲಿಗೆ ಹಾಕಬೇಕು’ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಅನಿಲ್ ಬೋಂಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಹುಲ್ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ರು,ಉಡುಗೊರೆ ನೀಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಶಿವಸೇನಾ ಶಾಸಕ ಸಂಜಯ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬೋಂಡೆ. ‘ ನಾಲಗೆ ಕತ್ತರಿಸುವ ಭಾಷೆ ಸರಿಯಲ್ಲ. ಆದರೆ ರಾಹುಲ್ ಗಾಂಧಿ ಮೀಸಲಾತಿ ವಿರುದ್ಧ ನೀಡಿರುವ ಹೇಳಿಕೆ ಅಪಾಯಕಾರಿಯದ್ದು. ವಿದೇಶಗಳಲ್ಲಿ ಯಾರಾದರೂ ಇಂತಹ ಹೇಳಿಕೆಯನ್ನು ನೀಡಿದರೆ, ಅವರ ನಾಲಗೆಯನ್ನು ಕತ್ತರಿಸುವ ಬದಲು ಹೊಲಿಗೆ ಹಾಕಲಾಗುತ್ತದೆ. ರಾಹುಲ್ ಗಾಂಧಿಯಂತಹವರ ನಾಲಗೆಗೆ ಹೊಲಿಗೆ ಹಾಕುವ ಅವಶ್ಯಕತೆಯಿದೆ’ ಎಂದರು. ಈ ನಡುವೆ ಬೋಂಡೆ ಹೇಳಿಕೆ ವಿರುದ್ಧ ಅಮರಾವತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.