ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನುಸುಳುಕೋರರೂ ಸೇರಿ ಎಲ್ಲ ನಾಗರಿಕರಿಗೆ 450 ರು.ಗೆ ಗ್ಯಾಸ್ ಸಿಲಿಂಡರ್ : ಮೋದಿ ಪ್ರಹಾರ

| Published : Nov 15 2024, 12:31 AM IST / Updated: Nov 15 2024, 05:04 AM IST

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನುಸುಳುಕೋರರೂ ಸೇರಿ ಎಲ್ಲ ನಾಗರಿಕರಿಗೆ 450 ರು.ಗೆ ಗ್ಯಾಸ್ ಸಿಲಿಂಡರ್ : ಮೋದಿ ಪ್ರಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಜಾರ್ಖಂಡ್ ಉಸ್ತುವಾರಿ ಗುಲಾಂ ಅಹ್ಮದ್ ಮಿರ್ ಅವರು, ‘ಜಾರ್ಖಂಡಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನುಸುಳುಕೋರರೂ ಸೇರಿ ಎಲ್ಲ ನಾಗರಿಕರಿಗೆ 450 ರು.ಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು’ ಎಂದು ಹೇಳಿದ್ದು ವಿವಾದಕ್ಕೀಡಾಗಿದೆ.

 ರಾಂಚಿ :  ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಜಾರ್ಖಂಡ್ ಉಸ್ತುವಾರಿ ಗುಲಾಂ ಅಹ್ಮದ್ ಮಿರ್ ಅವರು, ‘ಜಾರ್ಖಂಡಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನುಸುಳುಕೋರರೂ ಸೇರಿ ಎಲ್ಲ ನಾಗರಿಕರಿಗೆ 450 ರು.ಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು’ ಎಂದು ಹೇಳಿದ್ದು ವಿವಾದಕ್ಕೀಡಾಗಿದೆ. ಈ ಹೇಳಿಕೆಯಿಂದ ಖುದ್ದು ಪ್ರಧಾನಿ ನರೇಂದ್ರ ಮೋದಿ  ‘ಕಾಂಗ್ರೆಸ್‌ ನುಸುಳುಕೋರರ ಪರ ಪಕ್ಷ ಎಂಬುದು ಸಾಬೀತಾಗಿದೆ’ ಎಂದಿದ್ದಾರೆ.

ಜಾಖಂಡ್‌ನ ಬೆರ್ಮೋ ಎಂಬಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಿರ್‌, ‘ನಮ್ಮ ಸರ್ಕಾರ ರಚನೆ ಆದರೆ ಡಿ.1ರಿಂದ 450 ರು.ಗೆ ರಾಜ್ಯದಲ್ಲಿ ಎಲ್ಲರಿಗೂ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದೇವೆ. ಇದು ಜನಸಾಮಾನ್ಯರಿಗಾಗಿ... ಅವರು ಹಿಂದೂಗಳು, ಮುಸ್ಲಿಮರು, ನುಸುಳುಕೋರರು - ಯಾರೇ ಆಗಿರಲಿ..’ ಎಂದರು.

ಇದಕ್ಕೆ ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ತಿರುಗೇಟು ನೀಡಿದ ಮೋದಿ, ‘ಇಂದು, ಕಾಂಗ್ರೆಸ್ ನಾಯಕರೊಬ್ಬರು ಜಾರ್ಖಂಡ್‌ನಲ್ಲಿ ನುಸುಳುಕೋರರಿಗೂ ಅಗ್ಗದ ಗ್ಯಾಸ್ ಸಿಲಿಂಡರ್‌ ನೀಡುತ್ತೇವೆ ಎಂದಿದ್ದಾರೆ. ನುಸುಳುಕೋರರನ್ನು ಹೊಗಳುವ ಇಂಥವರನ್ನು ನೀವು ಗೆಲ್ಲಿಸುತ್ತೀರಾ?’ ಎಂದು ಮತದಾರರನ್ನು ಪ್ರಶ್ನಿಸಿದರು.

‘ಕೇವಲ ಮತಕ್ಕೋಸ್ಕರ ದೇಶದೊಂದಿಗೆ ಮತ್ತು ನಿಮ್ಮ ಮಕ್ಕಳ ಉಜ್ವಲ ಭವಿಷ್ಯದೊಂದಿಗೆ ಕಾಂಗ್ರೆಸ್‌ ಆಡುತ್ತಿರುವ ಆಟಕ್ಕೆ ಇದು ಉದಾಹರಣೆ. ಸಮಾಜ ವಿಭಜಕರನ್ನು ನಾವು ತಡೆಬೇಕು. ಇದಕ್ಕೆ ‘ಏಕ್ ಹೈ ತೋ ಸೇಫ್ ಹೈ’ ಘೋಷಣೆಯೇ ಪರಿಹಾರ’ ಎಂದರು.

ಜಾರ್ಖಂಡಲ್ಲಿ ಸಾಕಷ್ಟು ಬಾಂಗ್ಲಾದೇಶಿ ನುಸುಳುಕೋರರು ಇದ್ದಾರೆ ಎನ್ನಲಾಗಿದ್ದು, ಇದು ಪ್ರಮುಖ ಚುನಾವಣಾ ವಿಷಯವಾಗಿದೆ.

ಮೋದಿ, ಶಾ ವಿರುದ್ಧ ಎಲೆಕ್ಷನ್‌ ಚಟುವಟಿಕೆ ನಿರ್ಬಂಧ ಕೋರಿ ಆಯೋಗಕ್ಕೆ ಕೈ ಮನವಿ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಚುನಾವಣಾ ಪ್ರಚಾರದ ವೇಳೆ ಸುಳ್ಳು, ವಿಭಜನಕಾರಿ, ದುರುದ್ದೇಶಪೂರಿತ ಮತ್ತು ನಿಂದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ಸಲ್ಲಿಸಿದೆ.ಅಲ್ಲದೆ ಇದೇ ಕಾರಣಕ್ಕಾಗಿ, ಸದ್ಯ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಉಳಿದ ಅವಧಿಗೆ ಇಬ್ಬರೂ ಯಾವುದೇ ಚುನಾವನಾ ಸಂಬಂಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ನಿಷೇಧಿಸಬೇಕು ಎಂದು ಕಾಂಗ್ರೆಸ್‌ ಆಯೋಗಕ್ಕೆ ಮನವಿ ಮಾಡಿದೆ. ಅಲ್ಲದೆ ಈ ಇಬ್ಬರು ನಾಯಕರ ಹೇಳಿಕೆ ಕುರಿತು ವಿಸ್ರೃತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.ಎರಡು ದಿನಗಳ ಹಿಂದೆ ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಇಂಥದ್ದೇ ಆರೋಪ ಮಾಡಿ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಮೋದಿ ಸಂವಿಧಾನ ಓದಿಲ್ಲ, ಹಾಗಾಗಿ ಅವರಿಗದು ಖಾಲಿ ಕಾಣುತ್ತದೆ: ರಾಹುಲ್‌ ಟೀಕೆ

ನಂದುರ್ಬಾರ್‌/ ನಾಂದೇಡ್(ಮಹಾರಾಷ್ಟ್ರ): ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಸಂವಿಧಾನ ಸಂಬಂಧಿತ ವಾಕ್‌ಸಮರ ಮುಂದುವರೆದಿದ್ದು, ‘ಪ್ರದಾನಿ ಮೋದಿ ಸಂವಿಧಾನ ಓದಿಲ್ಲ. ಹಾಗಾಗಿ ಅವರಿಗೆ ಅದು ಖಾಲಿ ಕಾಣುತ್ತದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.ಇಲ್ಲಿ ನಡೆದ ಚುನಾವಣಾ ಪೂರ್ವ ಪ್ರಚಾರದಲ್ಲಿ ಮಾತನಾಡಿದ ರಾಹುಲ್‌, ‘ನಾನು ಖಾಲಿ ಸಂವಿಧಾನ ತೋರಿಸುತ್ತೇನೆ ಎಂದು ಮೋದಿ ಹೇಳುತ್ತಾರೆ. ಏಕೆಂದರೆ ಅದರಲ್ಲೇನಿದೆ ಎಂಬುದು ಅವರಿಗೆ ತಿಳಿದಿಲ್ಲ.

 ಸಂವಿಧಾನವನ್ನು ಓದಿದ್ದರೆ, ಅವರು ಹೀಗೆ ವರ್ತಿಸುತ್ತಿರಲಿಲ್ಲ. 25 ಶ್ರೀಮಂತರ 16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ ಅವರು ಬಡ ರೈತರ ಸಾಲ ಮನ್ನಾ ಮಾಡುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು. ಜೊತೆಗೆ, ಸಂವಿಧಾನದ ಬಣ್ಣವಲ್ಲ, ಅದರಲ್ಲೇನು ಬರೆದಿದೆ ಎನ್ನುವುದು ಮುಖ್ಯ ಎಂದರು.