ಸಾರಾಂಶ
ದೆಹಲಿ ಕಾಂಗ್ರೆಸ್ ಪಕ್ಷ, ಮುಂಬರುವ ಚುನಾವಣೆ ಸಂಬಂಧ ಮತ್ತೊಂದು ಭರ್ಜರಿ ಗ್ಯಾರಂಟಿ ಯೋಜನೆ ಘೋಷಿಸಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಮಾಸಿಕ 8500 ರು. ಕೌಶಲ್ಯಾಭಿವೃದ್ಧಿ ಭತ್ಯೆ ನೀಡುವುದಾಗಿ ಪಕ್ಷ ಹೇಳಿದೆ.
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಗೆದ್ದೇ ತೀರುವ ಹಠಕ್ಕೆ ಬಿದ್ದಂತೆ ತೋರುತ್ತಿರುವ ಕಾಂಗ್ರೆಸ್ ಪಕ್ಷ, ಮುಂಬರುವ ಚುನಾವಣೆ ಸಂಬಂಧ ಮತ್ತೊಂದು ಭರ್ಜರಿ ಗ್ಯಾರಂಟಿ ಯೋಜನೆ ಘೋಷಿಸಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಮಾಸಿಕ 8500 ರು. ಕೌಶಲ್ಯಾಭಿವೃದ್ಧಿ ಭತ್ಯೆ ನೀಡುವುದಾಗಿ ಪಕ್ಷ ಹೇಳಿದೆ.
ಈ ಕುರಿತು ಭಾನುವಾರ ಇಲ್ಲಿ ಮಾಹಿತಿ ನೀಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್, ‘ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಯುವ ಉಡಾನ್ ಯೋಜನೆಯಡಿ ನಿರುದ್ಯೋಗಿಳಿಗೆ ಒಂದು ವರ್ಷದ ಅವಧಿಗೆ ಮಾಸಿಕ 8500 ರು.ತರಬೇತಿ ಭತ್ಯೆ ನೀಡಲಾಗುವುದು. ಆದರೆ ಇದು ಎಲ್ಲ ನಿರುದ್ಯೋಗಿಗಳಿಗೂ ಬರುವುದಿಲ್ಲ. ಬದಲಾಗಿ ಯಾವುದಾದರೂ ಕಂಪನಿ, ಫ್ಯಾಕ್ಟರಿ ಅಥವಾ ಸಂಘಟನೆಯಲ್ಲಿ ಸೇರಿಕೊಂಡು ಅಲ್ಲಿ ಕೆಲಸ ಮಾಡುತ್ತಿದ್ದರೆ, ಅವರಿಗೆ ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಲು ನೆರವಾಗುವಂತೆ ಕಂಪನಿ ಮೂಲಕವೇ ಒಂದು ವರ್ಷದ ಅವಧಿಗೆ ಮಾಸಿಕ 8500 ರು. ನೆರವು ಸಿಗುವಂತೆ ಮಾಡಲಾಗುವುದು’ ಎಂದು ತಿಳಿಸಿದರು.ಇದಕ್ಕೂ ಮೊದಲು ಮಹಿಳೆಯರಿಗೆ ಮಾಸಿಕ 2500 ರು. ಆರ್ಥಿಕ ನೆರವು ನೀಡುವ ಮತ್ತು ಪ್ರತಿ ಕುಟುಂಬಕ್ಕೂ 25 ಲಕ್ಷ ರು.ವರೆಗೆ ಆರೋಗ್ಯ ವಿಮೆ ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು.