ಕೇಂದ್ರ ಸರ್ಕಾರ ಘೋಷಿಸಿದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಬಿಜೆಪಿ ಹಾಗೂ ಕಾಂಗ್ರೆಸ್‌ ವಾಕ್ಸಮರಕ್ಕೆ ಕಾರಣವಾಗಿದೆ.

ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಬಿಜೆಪಿ ಹಾಗೂ ಕಾಂಗ್ರೆಸ್‌ ವಾಕ್ಸಮರಕ್ಕೆ ಕಾರಣವಾಗಿದೆ. ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌, ‘ಯುಪಿಎಸ್‌ನಲ್ಲಿರುವ ‘ಯು’ ಮೋದಿ ಸರ್ಕಾರದ ಯು-ಟರ್ನ್‌ ಅನ್ನು ಸೂಚಿಸುತ್ತದೆ. ಈಗಿನ ಪಿಂಚಣಿಯ ಬದಲು ಮತ್ತೆ ಹಳೆಯ ವ್ಯವಸ್ಥೆಗೇ ಹಿಂತಿರುಗಿದೆ’ ಎಂದು ಭಾನುವಾರ ವ್ಯಂಗ್ಯವಾಡಿದೆ.

ಆದರೆ ಇದಕ್ಕೆ ಬಿಜೆಪಿ ವಕ್ತಾರ ರವಿಶಂಕರ ಪ್ರಸಾದ್‌ ತಿರುಗೇಟು ನೀಡಿ, ‘ಯುಪಿಎಸ್‌ ಅನ್ನು ಯು-ಟರ್ನ್‌ ಎಂದಿರುವ ಕಾಂಗ್ರೆಸ್, ತನ್ನ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲೇಕೆ ಹಳೆಯ ಪಿಂಚಣಿ (ಒಪಿಎಸ್) ವ್ಯವಸ್ಥೆ ಜಾರಿ ಮಾಡಿಲ್ಲ?’ ಎಂದು ಪ್ರಶ್ನಿಸಿದ್ದಾರೆ.

ಖರ್ಗೆ ಕಿಡಿ: ಯುಪಿಎಸ್‌ ಬಗ್ಗೆ ಟ್ವೀಟ್‌ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಲೋಕಸಭೆ ಚುನಾವಣೆಯ ನಂತರ ಪ್ರಧಾನಿ ಮೋದಿಯವರ ಅಧಿಕಾರ ಮದದ ವಿರುದ್ಧ ಜನರ ಶಕ್ತಿ ಗೆದ್ದಿದೆ. ಬಜೆಟ್‌ನಲ್ಲಿ ಘೋಷಿಸಿದ ಕ್ಯಾಪಿಟಲ್‌ ಗೇನ್‌ ತೆರಿಗೆಯ ಹಿಂಪಡೆಯುವಿಕೆ, ವಕ್ಫ್‌ ಬಿಲ್‌ ಅನ್ನು ಜಂಟಿ ಸಂಸದೀಯ ಸಮಿತಿಗೆ ಕಳಿಸುವಿಕೆ, ಪ್ರಸಾರ ಸಂಬಂಧಿತ ಮಸೂದೆ ರದ್ದು ಹಾಗೂ ಲ್ಯಾಟರಲ್‌ ಎಂಟ್ರಿ ಅಧಿಸೂಚನೆ ರದ್ದು ಇದಕ್ಕೆ ಸಾಕ್ಷಿ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ವಿವಾದ ಸೃಷ್ಟಿಸಿದ ಕಾರಣ ಏಕೀಕೃತ ಪಿಂಚಣಿ ಯೋಜನೆ ಘೋಷಿಸಿದ್ದಾರೆ’ ಎಂದು ಬರೆದಿದ್ದಾರೆ.

ಹರ್ಯಾಣ, ಜಮ್ಮು-ಕಾಶ್ಮೀರ ರಾಜ್ಯಗಳ ವಿಧಾನ ಸಭೆ ಘೋಷಣೆ ಬೆನ್ನಲ್ಲೇ ಪಿಂಚಣಿ ಭದ್ರತೆ ಒದಗಿಸುವ ಏಕೀಕೃತ ಪಿಂಚಣಿ ಯೋಜನೆಯನ್ನು ಬಿಜೆಪಿ ಸರ್ಕಾರ ಶನಿವಾರ ಘೋಷಿಸಿತ್ತು.