ಸಾರಾಂಶ
ಭುವನೇಶ್ವರ : ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮನೆಯಲ್ಲಿ ನಡೆದ ಗಣೇಶೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದಕ್ಕೆ ಪ್ರತಿಪಕ್ಷಗಳು ಹಾಗೂ ಕಾನೂನು ತಜ್ಞರ ಟೀಕೆಯಿಂದ ಉಂಟಾಗಿದ್ದ ವಿವಾದ ಬಗ್ಗೆ ಇದೇ ಮೊದಲ ಬಾರಿ ಮೋದಿ ಪ್ರತಿಕ್ರಿಯಿಸಿದ್ದಾರೆ. ನಾನು ಗಣೇಶ ಪೂಜೆಯಲ್ಲಿ ಪಾಲ್ಗೊಂಡಿದ್ದಕ್ಕೆ ಕಾಂಗ್ರೆಸ್ ಹಾಗೂ ಅದರ ಪರವಾಗಿರುವವರು ಕೋಪಗೊಂಡಿದ್ದಾರೆ. ಸಮಾಜವನ್ನು ಒಡೆಯುತ್ತಿರುವ ಅಧಿಕಾರದಾಹಿ ವ್ಯಕ್ತಿಗಳು ಈ ಹಬ್ಬದ ವಿಚಾರದಲ್ಲೂ ಸಮಸ್ಯೆ ಹೊಂದಿದ್ದಾರೆ ಎಂದು ಕುಟುಕಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ಆಳ್ವಿಕೆಯ ಕರ್ನಾಟಕದಲ್ಲಿ ಗಣೇಶ ವಿಗ್ರಹವನ್ನೂ ಬಂಧಿಸಲಾಗಿದೆ. ಆ ಚಿತ್ರ ನೋಡಿ ಇಡೀ ದೇಶವೇ ಬೇಸರಗೊಂಡಿದೆ. ಇಂತಹ ದ್ವೇಷಕಾರಿ ಶಕ್ತಿಗಳು ಮುನ್ನಡೆಯಲು ನಾವು ಬಿಡಬಾರದು ಎಂದು ಹೇಳಿದ್ದಾರೆ.
ಮಹಿಳೆಯರಿಗೆ ವಾರ್ಷಿಕ 10 ಸಾವಿರ ರು. ನೀಡುವ ಒಡಿಶಾ ಬಿಜೆಪಿ ಸರ್ಕಾರದ ಯೋಜನೆ ‘ಸುಭದ್ರಾ’ಗೆ ಚಾಲನೆ ನೀಡಿ ಮಾತನಾಡಿದ ಅವರು, ಗಣೇಶ ಉತ್ಸವ ಎಂಬುದು ನಮ್ಮ ದೇಶದ ನಂಬಿಕೆಯ ಉತ್ಸವ ಅಷ್ಟೇ ಅಲ್ಲ. ಸ್ವಾತಂತ್ರ್ಯ ಹೋರಾಟದಲ್ಲೂ ಅದು ಪ್ರಮುಖ ಪಾತ್ರವಹಿಸಿದೆ. ಒಡೆದು ಆಳುವ ನೀತಿಯನ್ನು ಹೊಂದಿದ್ದ ಬ್ರಿಟಿಷರು ಗಣೇಶ ಉತ್ಸವವನ್ನು ದ್ವೇಷಿಸುತ್ತಿದ್ದರು. ಇಂದು ನಾನು ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದಕ್ಕೆ ಕಾಂಗ್ರೆಸ್ ಹಾಗೂ ಅದರ ಪರವಾಗಿರುವವರು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
==
ಪ್ರಧಾನಿ ಮೋದಿಗೆ 74ನೇ ಜನ್ಮದಿನ: ರಾಷ್ಟ್ರಪತಿ ಸೇರಿ ಗಣ್ಯರಿಂದ ಶುಭಾಶಯನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ 74 ವರ್ಷ ತುಂಬಿತು. ಈ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್ ಆದಿಯಾಗಿ ಆಡಳಿತ ಮತ್ತು ವಿಪಕ್ಷಗಳ ನಾಯಕರು, ಸಂಸದರು, ಮುಖ್ಯಮಂತ್ರಿಗಳು, ರಾಜ್ಯಪಾಲರು ಗಣ್ಯರು ಶುಭಾಶಯ ಕೋರಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಎಕ್ಸ್‌ನಲ್ಲಿ ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ 74ನೇ ಜನ್ಮದಿನದ ಶುಭಾಶಯಗಳು. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕರೆದೊಯ್ಯಲು ಭಗವಂತ ನಿಮಗೆ ಇನ್ನು ಹೆಚ್ಚು ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಶುಭ ಹಾರೈಸಿದರು.
==
ಸೆ.21ರಿಂದ ಮೋದಿ 3 ದಿನ ಅಮೆರಿಕ ಪ್ರವಾಸ: ಕ್ವಾಡ್ ಸಮ್ಮೇಳನ, ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಭಾಗಿ
ನವದೆಹಲಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸೆ.21ರಿಂದ 23ರವರೆಗೆ ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.ಈ ಕುರಿತು ಮಂಗಳವಾರ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯ, ‘ಸೆ.21ರಂದು ಡೆಲ್ವಾರೆಯ ವಿಲ್ಮಿಂಗ್‌ಟನ್‌ನಲ್ಲಿ ವಾರ್ಷಿಕ ಕ್ವಾಡ್ ಸಮ್ಮೇಳನ ನಡೆಯಲಿದೆ. ಅದರಲ್ಲಿ ಭಾರತದ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಸೆ.22ರಂದು ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಜೊತೆಗೆ ಜಾಗತಿಕ ಕಂಪನಿಗಳ ಸಿಇಒಗಳ ಜೊತೆ ಮಾತುಕತೆ ನಡೆಸಲಿದ್ದಾರೆ.. ಸೆ.23ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಸಮ್ಮಿಟ್ ಆಫ್ ಫ್ಯೂಚರ್’ ಸಮ್ಮೇಳಣ ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ’ ಎಂದು ತಿಳಿಸಿದೆ.