ಸಾರಾಂಶ
ನಾಗಪುರ: 2024ರ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆಯನ್ನು ಆರಂಭಿಸಿರುವ ಕಾಂಗ್ರೆಸ್ ತನ್ನ 139ನೇ ಸಂಸ್ಥಾಪನಾ ದಿನದಂದೇ ಆರ್‌ಎಸ್‌ಎಸ್‌ನ ಕೇಂದ್ರ ಕಚೇರಿ ಇರುವ ಮಹಾರಾಷ್ಟ್ರದ ನಾಗಪುರದಲ್ಲಿ ಚುನಾವಣಾ ರಣಕಹಳೆಯನ್ನು ಮೊಳಗಿಸಿದೆ. ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದು, ಮಹಿಳೆಯರು ಮತ್ತು ಬಡವರಿಗಾಗಿ ‘ನ್ಯಾಯ ಯೋಜನೆ’ ಜಾರಿ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಶ್ವಾಸನೆ ನೀಡಿದ್ದಾರೆ.ಆರ್‌ಎಸ್‌ಎಸ್‌ನ ಕೇಂದ್ರ ಕಚೇರಿ ಇರುವ ನಾಗಪುರದಲ್ಲೇ ಕಾಂಗ್ರೆಸ್ ಆರಂಭಿಸಿರುವ ಮೊದಲ ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಬಿಜೆಪಿ ಸರ್ಕಾರ ಅತಿ ಹೆಚ್ಚು ಜನರನ್ನು ಮತ್ತೆ ಬಡತನಕ್ಕೆ ತಳ್ಳಿದೆ. ನಮಗೆ 2 ಇಂಡಿಯಾಗಳು ಬೇಡ, ಕೇವಲ ಇಂಡಿಯಾ ಮೈತ್ರಿಕೂಟ ಮಾತ್ರ ದೇಶದಲ್ಲಿ ಉದ್ಯೋಗವಕಾಶ ಒದಗಿಸಬಲ್ಲದು. ದೇಶದಲ್ಲಿರುವ ಒಬಿಸಿ, ದಲಿತರು ಮತ್ತು ಬುಡಕಟ್ಟು ಜನಾಂಗಳು ಸರಿಯಾದ ಪ್ರಾತಿನಿಧ್ಯ ಪಡೆದುಕೊಂಡಿಲ್ಲ. ಹೀಗಾಗಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಾಗುವುದು ಎಂದು ಹೇಳಿದರು. ಈ ಮೊದಲು ಪ್ರಧಾನಿ ಮೋದಿ ಅವರು ತಮ್ಮನ್ನು ಒಬಿಸಿ ಎಂದು ಕರೆದುಕೊಂಡಿದ್ದರು. ಆದರೆ ನಾನು ಜಾತಿ ಗಣತಿ ನಡೆಸುವಂತೆ ಕೇಳಿದಾಗ, ದೇಶದಲ್ಲಿರುವುದು ಕೇವಲ ಬಡವರು ಎಂಬ ಜಾತಿ ಮಾತ್ರ ಎಂದು ಹೇಳಿದರು. ಇರುವುದು ಒಂದೇ ಜಾತಿ ಆದರೆ ಮೊದಲೇಕೆ ಒಬಿಸಿ ಎಂದು ಹೇಳಿಕೊಂಡಿರಿ ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಇದೇ ವೇಳೆ ಮಾತನಾಡಿದ ಖರ್ಗೆ, ನಾಗಪುರ ಪ್ರಗತಿಪರತೆಯನ್ನು ಸಾರಿದ ಅಂಬೇಡ್ಕರ್ ಅವರ ಕರ್ಮ ಭೂಮಿಯ ಜೊತೆಗೆ ಆರ್‌ಎಸ್‌ಎಸ್‌ನ ನೆಲವೂ ಆಗಿದೆ. ಪ್ರಸ್ತುತ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಹಣದುಬ್ಬರ ಅಧಿಕವಾಗಿದೆ. ದೇಶದಲ್ಲಿ 30 ಉದ್ಯೋಗಗಳು ಖಾಲಿ ಇವೆ. ದೇಶದಲ್ಲಿ ಬಡವರು ಬಡವರಾಗುತ್ತಿದ್ದರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರು ಮತ್ತು ಬಡವರಿಗಾಗಿ ‘ನ್ಯಾಯ ಯೋಜನೆ’ಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದರು. ಈ ರ್‍ಯಾಲಿಯಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಭಾಗಿಯಾಗಿರಲಿಲ್ಲ.