ಕಾಂಗ್ರೆಸ್‌ನಲ್ಲಿ ತಮ್ಮನ್ನು ಇದೇ ರೀತಿ ನಿರ್ಲಕ್ಷ್ಯ ಮಾಡುತ್ತಾ ಹೋದರೆ ನನ್ನ ಬಳಿ ಬೇರೆ ಆಯ್ಕೆಗಳೂ ಇವೆ : ತರೂರ್‌

| N/A | Published : Feb 24 2025, 12:37 AM IST / Updated: Feb 24 2025, 05:15 AM IST

ಸಾರಾಂಶ

ಕಾಂಗ್ರೆಸ್‌ನಲ್ಲಿ ತಮ್ಮನ್ನು ಇದೇ ರೀತಿ ನಿರ್ಲಕ್ಷ್ಯ ಮಾಡುತ್ತಾ ಹೋದರೆ ನನ್ನ ಬಳಿ ಬೇರೆ ಆಯ್ಕೆಗಳೂ ಇವೆ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ ಎಚ್ಚರಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್‌ನಲ್ಲಿ ತಮ್ಮನ್ನು ಇದೇ ರೀತಿ ನಿರ್ಲಕ್ಷ್ಯ ಮಾಡುತ್ತಾ ಹೋದರೆ ನನ್ನ ಬಳಿ ಬೇರೆ ಆಯ್ಕೆಗಳೂ ಇವೆ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ ಎಚ್ಚರಿಸಿದ್ದಾರೆ.

ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಅವರು, ಈ ಮಾತು ಹೇಳಿದ್ದಾರೆ. ಆದರೆ ತಾವು ಅಂಥ ಯತ್ನಕ್ಕೆ ಕೈಹಾಕಲ್ಲ ಎಂದು ಹೇಳಿದ್ದರೂ ಅವರ ಮನದಿಂಗಿತ ಬಹಿರಂಗವು ಸಂಚಲನಕ್ಕೆ ಕಾರಣವಾಗಿದೆ. ಇದೇ ವೇಳೆ, ಕಾಂಗ್ರೆಸ್‌ ತನ್ನ ಆಲೋಚನೆ ಬದಲಿಸದಿದ್ದರೆ 2025ರ ಕೇರಳ ಚುನಾವಣೆ ಬಳಿಕ 3ನೇ ಬಾರಿ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ ಎಂದಿದ್ದಾರೆ.

ತರೂರ್‌ ಅವರು ಇತ್ತೀಚೆಗೆ ಕೇರಳದ ಸಿಪಿಎಂ ನೇತೃತ್ವದ ಸರ್ಕಾರದ ಕೆಲಸ-ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ, ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಕುರಿತೂ ಹೊಗಳಿ ಕಾಂಗ್ರೆಸ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ತರೂರ್‌ ನೀಡಿದ ಈ ಹೇಳಿಕೆ ಕುತೂಹಲ ಮೂಡಿಸಿದೆ.

ಏ 8, 9ಕ್ಕೆ ಅಹಮದಾಬಾದ್‌ನಲ್ಲಿ ಎಐಸಿಸಿ ಅಧಿವೇಶನ

ನವದೆಹಲಿ: ಗುಜರಾತಿನ ಅಹಮದಾಬಾದ್‌ನಲ್ಲಿ ಏಪ್ರಿಲ್ 8 ಮತ್ತು 9 ರಂದು ಎಐಸಿಸಿ ಅಧಿವೇಶನ ನಡೆಸುವುದಾಗಿ ಕಾಂಗ್ರೆಸ್‌ ಪಕ್ಷ ಭಾನುವಾರ ಘೋಷಿಸಿದ್ದು, ಬಿಜೆಪಿಯ ಜನ ವಿರೋಧಿ ನೀತಿಗಳು, ಚುನಾವಣೆಗಳು, ಪಕ್ಷದ ಭವಿಷ್ಯದ ಬಗ್ಗೆ ಕಾರ್ಯಕ್ರಮದಲ್ಲಿ ಚರ್ಚಿಸಲಾಗುವುದು ಎಂದಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಕಟಣೆ ಹೊರಡಿಸಿದ್ದು, ‘ಈ ಮಹತ್ವದ ಸಭೆಯು ದೇಶಾದ್ಯಂತ ಎಐಸಿಸಿ ಪ್ರತಿನಿಧಿಗಳನ್ನು ಒಗ್ಗೂಡಿಸಲಿದೆ. ಜನ ವಿರೋಧಿ ನೀತಿಗಳಿಂದ ಎದುರಾಗಿರುವ ಸವಾಲುಗಳು, ಸಂವಿಧಾನ ಮತ್ತು ಅದರ ಮೌಲ್ಯಗಳ ಮೇಲೆ ಬಿಜೆಪಿ ನಿರಂತರ ದಾಳಿಯ ಕುರಿತು ಚರ್ಚಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಪಕ್ಷದ ಭವಿಷ್ಯದ ಮಾರ್ಗಸೂಚಿ ಬಗ್ಗೆ ಚರ್ಚಿಸುತ್ತೇವೆ’ ಎಂದಿದ್ದಾರೆ.

ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅಧ್ಯಕ್ಷತೆ ವಹಿಸಲಿದ್ದು, ಏ.8 ರಂದು ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ( ಸಿಡಬ್ಲ್ಯೂಸಿ) ಸಭೆ ನಡೆಯಲಿದ್ದು, ಏ.9ರಂದು ಎಐಸಿಸಿ ಪ್ರತಿನಿಧಿಗಳ ಸಭೆ ನಡೆಯಲಿದೆ.