ಸಾರಾಂಶ
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಭರವಸೆಗಳ ಸರಣಿಯನ್ನು ಮುಂದುವರೆಸಿದೆ. ಪಕ್ಷ ಅಧಿಕಾರಕ್ಕೇರಿದರೆ 500 ರು.ಗೆ ಎಲ್‌ಪಿಜಿ ಸಿಲಿಂಡರ್, ಉಚಿತ ಪಡಿತರ ಹಾಗೂ ಕರ್ನಾಟಕದ ಗೃಹಜ್ಯೋತಿ ಮಾದರಿಯಲ್ಲಿ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ.
ದೆಹಲಿಯ ಎಐಸಿಸಿ ಉಸ್ತುವಾರಿ ಖ್ವಾಜಿ ನಿಜಾಮುದ್ದೀನ್ ಹಾಗೂ ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಅವರೊಂದಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಘೋಷಣೆ ಮಾಡಿದ್ದಾರೆ.
ಈ ಮೊದಲು, ಗೃಹಲಕ್ಷಿ ಮಾದರಿಯ ಪ್ಯಾರಿ ದೀದಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2,500 ರು., ಜೀವನ್ ರಕ್ಷಕ ಯೋಜನೆಯಡಿ ಪರಿವಾರಗಳಿಗೆ 25 ಲಕ್ಷದ ವರೆಗೆ ಉಚಿತ ಜೀವವಿಮೆ, 1 ವರ್ಷದ ವರೆಗೆ ಶಿಕ್ಷಿತ ನಿರುದ್ಯೋಗಿಗಳಿಗೆ ತಿಂಗಳಿಗೆ 8,500 ರು. ನೀಡುವ ಭರವಸೆ ನೀಡಿತ್ತು. ವಿಶೇಷವೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2000 ರು. ಮತ್ತು ಗೃಹಜ್ಯೋತಿಯಡಿ ಮಾಸಿಕ 200 ಯುನಿಟ್ ವಿದ್ಯುತ್ ನೀಡುತ್ತಿದೆ. ದೆಹಲಿಯಲ್ಲಿ ಈ ಎರಡರ ಪ್ರಮಾಣವೂ ಹೆಚ್ಚಿದೆ.
70 ಸದಸ್ಯಬಲದ ವಿಧಾನಸಭೆಗೆ ಫೆ.5ರಂದು ಚುನಾವಣೆ ನಡೆಯಲಿದ್ದು, ಫೆ.8ರಂದು ಫಲಿತಾಂಶ ಪ್ರಕಟವಾಗಿಲಿದೆ.