ಸಾರಾಂಶ
10 ವರ್ಷಗಳಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರತಿಪಕ್ಷದ ನಾಯಕರೊಬ್ಬರು (ರಾಹುಲ್ ಗಾಂಧಿ) ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಆದರೆ ಪ್ರೋಟೋಕಾಲ್ ಪ್ರಕಾರ ಅವರಿಗೆ ಮುಂದಿನ ಸಾಲಿನ ಆಸನವನ್ನು ನೀಡದೇ ಹಿಂಭಾಗದ ಆಸನ ನೀಡಲಾಗಿತ್ತು.
ನವದೆಹಲಿ: 10 ವರ್ಷಗಳಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರತಿಪಕ್ಷದ ನಾಯಕರೊಬ್ಬರು (ರಾಹುಲ್ ಗಾಂಧಿ) ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಆದರೆ ಪ್ರೋಟೋಕಾಲ್ ಪ್ರಕಾರ ಅವರಿಗೆ ಮುಂದಿನ ಸಾಲಿನ ಆಸನವನ್ನು ನೀಡದೇ ಹಿಂಭಾಗದ ಆಸನ ನೀಡಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕ ಕ್ಯಾಬಿನೆಟ್ ಮಂತ್ರಿಗೆ ಸಮಾನವಾಗಿದ್ದರೂ ಸಹ, ಒಲಿಂಪಿಯನ್‌ಗಳ ಹಿಂದೆ ಕೊನೆಯಿಂದ 2ನೇ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಲಾಯಿತು. ಮುಂದಿನ ಸಾಲುಗಳಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್, ಅಮಿತ್ ಶಾ ಮತ್ತು ಎಸ್ ಜೈಶಂಕರ್ ಇದ್ದರು. ಸಿಜೆಐ ಮತ್ತು ಅವರ ಪತ್ನಿ ಮುಂದಿನ ಸಾಲಿನಲ್ಲಿ ಕಾಣಿಸಿಕೊಂಡಿದ್ದರು.
ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿ, ‘ಒಲಿಂಪಿಕ್ಸ್ ಪಟುಗಳಿಗೆ ಗೌರವ ನೀಡಲು ಮೊದಲ ಸಾಲು ನೀಡಲಾಗಿತ್ತು’ ಎಂದಿದೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪಿಸಿದ್ದು, ‘ಒಲಿಂಪಿಕ್ಸ್ ಆಟಗಾರರಿಗೆ ಗೌರವ ನೀಡಲು ನಮ್ಮ ತಕರಾರಿಲ್ಲ. ಆದರೆ ಅಮಿತ್ ಶಾ ಹಾಗೂ ಇತರ ಸಚಿವರಿಗೆ ಮೊದಲ ಸಾಲಿನ ಆಸನ ನೀಡಿ, ರಾಹುಲ್‌ಗೆ ಮಾತ್ರ ಏಕೆ ಹಿಂದಿನ ಸಾಲು ನೀಡಲಾಗಿತ್ತು?’ ಎಂದು ಪ್ರಶ್ನಿಸಿದೆ.