ಸಾರಾಂಶ
ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ ಮತ್ತು ಅವರ ವಿರುದ್ಧ ದ್ವೇಷದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಜಮ್ಮು : ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನಾಲಗೆ ಕತ್ತರಿಸುವುದಾಗಿ ಬೆದರಿಸುವ, ಅವರನ್ನು ಭಯೋತ್ಪಾದಕ ಹಾಗೂ ದೇಶದ್ರೋಹಿ ಎಂದು ಬಿಂಬಿಸುವ ಯತ್ನಗಳ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ. ಆರ್‌ಎಸ್‌ಎಸ್- ಬಿಜೆಪಿಯ ವಿಷಕಾರಿ ಮನಸ್ಥಿತಿಯನ್ನು ಜನರಿಗೆ ತಿಳಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸತ್ಯ ಮಾತನಾಡಿದ ಕಾರಣಕ್ಕೆ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಇಂದಿರಾ ಗಾಂಧಿ ವಿರುದ್ಧ ಸೃಷ್ಟಿ ಮಾಡಿದ್ದಂತೆ ರಾಹುಲ್ ವಿರುದ್ಧವೂ ದ್ವೇಷದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರ ಪ್ರಚೋದನಾಕಾರಿ ಭಾಷಣಗಳನ್ನು ಪ್ರಧಾನಿ ಮೋದಿ ಅವರು ಕಡೆಗಣಿಸಿದ್ದಾರೆ. ಭಯ ಹೊಂದಿರುವ ಕಾರಣಕ್ಕೆ ಯಾರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಇಂತಹ ಹೇಳಿಕೆಗಳು ಹಾಗೂ ಪ್ರಚೋದನೆಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಜಮ್ಮುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕಾಂಗ್ರೆಸ್ ಅನ್ನು ಹೆದರಿಸಲು ಪ್ರಯತ್ನಿಸಿದರೆ ನಾವೇನೂ ಹೆದರುವುದಿಲ್ಲ. ನಮ್ಮನ್ನು ಹೆದರಿಸಲು ಯತ್ನಿಸುತ್ತಿರುವವರು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮನೆಯಲ್ಲಿ ಕುಳಿತಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು, ಪ್ರಾಣಾರ್ಪಣೆ ಮಾಡಿದ್ದು ನಮ್ಮ ಜನರು. ಗಾಂಧಿ ಕುಟುಂಬ ತ್ಯಾಗದ ಇತಿಹಾಸವನ್ನೇ ಹೊಂದಿದೆ ಎಂದರು.