ಸಾರಾಂಶ
ನವದೆಹಲಿ: ಪೀಲಿಭೀತ್ ಕ್ಷೇತ್ರದಿಂದ ಹಾಲಿ ಸಂಸದ ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಕಾಂಗ್ರೆಸ್ ಅವರಿಗೆ ಆಹ್ವಾನ ನೀಡಿದ್ದು, ಅವರಿಗೆ ಅಲ್ಲಿಂದಲೇ ಟಿಕೆಟ್ ನೀಡುವುದಾಗಿ ಆಫರ್ ನೀಡಿದೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ಬಂಗಾಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ, ‘ವರುಣ್ ಗಾಂಧಿ ಅವರು ಸಚ್ಚಾರಿತ್ರ್ಯ ಹೊಂದಿದ್ದು, ತಮ್ಮ ಜೀವನವನ್ನು ಪಾರದರ್ಶಕತೆಯಿಂದ ನಡೆಸಿದ್ದಾರೆ.
ಅವರು ಮೇಧಾವಿ ಆಗಿದ್ದರೂ ಸಹ ಗಾಂಧಿ ಕುಟುಂಬದ ಕುಡಿ ಎಂಬ ಕಾರಣದಿಂದ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿದೆ. ಅವರು ಕಾಂಗ್ರೆಸ್‌ಗೆ ಬರಲೆಂದು ಸ್ವಾಗತಿಸುತ್ತೇವೆ. ಅವರು ಬಂದಲ್ಲಿ ಪೀಲಿಭೀತ್ ಕ್ಷೇತ್ರದಿಂದಲೇ ಅವರಿಗೆ ಟಿಕೆಟ್ ನೀಡಲಾಗುವುದು’ ಎಂದು ತಿಳಿಸಿದರು.
ಬಿಜೆಪಿಯು ವರುಣ್ ಗಾಂಧಿ ಬದಲಿಗೆ ಈಗಷ್ಟೇ ಬಿಜೆಪಿ ಸೇರಿದ್ದ ಜಿತಿನ್ ಪ್ರಸಾದ ಅವರಿಗೆ ಪೀಲಿಭೀತ್ ಕ್ಷೇತ್ರದಿಂದ ಟಿಕೆಟ್ ನೀಡಿತ್ತು.
ಚುನಾವಣೆಗೆ ತಯಾರಿ ಆರಂಭಿಸಿದ್ದ ವರುಣ್: ಚುನಾವಣೆಗೆ ವರುಣ್ ಗಾಂಧಿ ಮಾನಸಿಕವಾಗಿ ಸಜ್ಜಾಗಿದ್ದು, ಈಗಾಗಲೇ ತಯಾರಿಯನ್ನು ಆರಂಭಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಅವರ ನಿಕಟವರ್ತಿಗಳ ಮೂಲಕ ನಾಮಪತ್ರದ ನಾಲ್ಕು ಪ್ರತಿಗಳನ್ನು ತರಿಸಿಕೊಂಡಿದ್ದರು. ಅಲ್ಲದೆ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಪ್ರಚಾರಕ್ಕೆಂದು ಕನಿಷ್ಠ ಎರಡು ಕಾರುಗಳು ಮತ್ತು 10 ಬೈಕ್‌ಗಳನ್ನು ಸಿದ್ಧಗೊಳಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದರು.
ಈಗ ಬಿಜೆಪಿ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಅವರು ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ವರುಣ್ ಗಾಂಧಿಯ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.