ಸಾರಾಂಶ
ವಿದ್ಯಾರ್ಥಿಗಳ ಸಂವಾದ ನಡೆಸುತ್ತಿರುವಾಗಲೇ ಘಟನೆ
ಶಾರ್ಪ್‌ಶೂಟರ್‌ನಿಂದ ಗುಂಡುಹಾರಿಸಿ ಚಾರ್ಲಿ ಕಿರ್ಕ್ ಹತ್ಯೆಕಿರ್ಕ್ ಹುತಾತ್ಮ ವ್ಯಕ್ತಿ: ಹತ್ಯೆ ಬಗ್ಗೆ ಟ್ರಂಪ್ ಆಘಾತ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆತ್ಮೀಯರಾಗಿದ್ದ ಬಲಪಂಥೀಯ ಯುವ ನಾಯಕ ಚಾರ್ಲಿ ಕಿರ್ಕ್ ಅವರನ್ನು ಯೂಟಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಗುಂಡಿಟ್ಟು ಗುರುವಾರ ಹತ್ಯೆ ಮಾಡಲಾಗಿದೆ. ಕಿರ್ಕ್ ಹತ್ಯೆಗೆ ಟ್ರಂಪ್ ಸೇರಿ ಅಮೆರಿಕದ ಎಲ್ಲಾ ರಾಜಕೀಯ ನಾಯಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಇದೊಂದು ರಾಜಕೀಯ ಹತ್ಯೆ ಎಂದು ಆರೋಪಿಸಲಾಗಿದೆ.ಕಾಲೇಜು ಕ್ಯಾಂಪಸ್‌ನಲ್ಲಿ ಹಾಕಿದ್ದ ವೇದಿಕೆಯಲ್ಲಿ ವಿದ್ಯಾರ್ಥಿಗಳ ಜತೆಗೆ ಕೈಯಲ್ಲಿ ಮೈಕ್ರೋಫೋನ್ ಹಿಡಿದು ಸಂವಾದ ನಡೆಸುತ್ತಿದ್ದಾಗ ಶಾರ್ಪ್‌ಶೂಟರ್‌ವೊಬ್ಬ ಕಿರ್ಕ್ ಅವರತ್ತ ಗುಂಡು ಹಾರಿಸಿದ್ದಾನೆ. ಆ ಗುಂಡು ಕಿರ್ಕ್ ಅವರ ಎಡಕುತ್ತಿಗೆ ಸೀಳಿಕೊಂಡು ಹೋಗಿದೆ. ಆಗ ಕಿರ್ಕ್ ಬಲಗೈಯಿಂದ ಎಡಕುತ್ತಿಗೆಯನ್ನು ಹಿಡಿಯುತ್ತಿದ್ದಂತೆ ಭಾರೀ ಪ್ರಮಾಣದಲ್ಲಿ ರಕ್ತ ಹೊರಚಿಮ್ಮಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಅವರು ಕೂತಲ್ಲಿಂದಲೇ ಹಿಂದೆ ಕುಸಿದು ಬಿದ್ದಿದ್ದಾರೆ.
ಘಟನೆಯಿಂದ ಆತಂಕಗೊಂಡ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿದ್ದು, ಇವರ ನಡುವೆ ಶೂಟರ್ ಕೂಡ ತಲೆಮರೆಸಿಕೊಂಡು ಹೊರಹೋಗಿದ್ದಾನೆ ಎನ್ನಲಾಗಿದೆ. ಕಳೆದ ವರ್ಷದ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಅವರ ಹತ್ಯೆಗೂ ಇದೇ ರೀತಿ ಯತ್ನಿಸಲಾಗಿತ್ತು. ಆಗ ಅವರು ಅದೃಷ್ಟವಶಾತ್ ಪಾರಾಗಿದ್ದರು.ಗನ್ ಸಂಸ್ಕೃತಿ ಕುರಿತು ಕೊನೆಯ ಪ್ರಶ್ನೆ:
ಕಿರ್ಕ್ ಅವರ ಕೊನೆಯ ಕ್ಷಣದ ವಿಡಿಯೋ ಇದೀಗ ಬಹಿರಂಗವಾಗಿದ್ದು, ಯುವ ರಾಜಕೀಯೇತರ ಸಂಘಟನೆಯೊಂದು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.ಕಳೆದ ಹತ್ತು ವರ್ಷದಲ್ಲಿ ಅಮೆರಿಕದಲ್ಲಿ ಎಷ್ಟು ಮಂದಿ ತೃತೀಯ ಲಿಂಗಿಗಳು ಮಾಸ್ ಶೂಟರ್‌ಗಳು ಆಗಿಹೋಗಿದ್ದಾರೆ ಗೊತ್ತಾ ಎಂಬ ಪ್ರಶ್ನೆಗೆ, ಕಿರ್ಕ್ ಅವರು ‘ಸಾಕಷ್ಟು ಮಂದಿ’ ಎಂದು ಉತ್ತರಿಸಿದ್ದರು. ಇದಾದ ಬಳಿಕ ಕಳೆದ ಹತ್ತು ವರ್ಷದಲ್ಲಿ ಅಮೆರಿಕದಲ್ಲಿ ಎಷ್ಟು ಮಂದಿ ಸಮೂಹ ಶೂಟರ್‌ಗಳು ಬಂದು ಹೋಗಿದ್ದಾರೆ ಗೊತ್ತಾ? ಎಂಬ ಪ್ರಶ್ನೆಗೆ, ‘ಗ್ಯಾಂಗ್ ಹಿಂಸಾಚಾರವನ್ನು ಕೌಂಟ್ ಮಾಡಬೇಕಾ, ಮಾಡಬಾರದಾ?’ ಎಂದು ಹೇಳುತ್ತಿರುವಾಗಲೇ, ಅವರ ಎಡಕುತ್ತಿಗೆಯನ್ನು ಗುಂಡು ಸೀಳಿಕೊಂಡು ಹೋಗಿದೆ.
ಕಿರ್ಕ್ ಹುತಾತ್ಮ- ಟ್ರಂಪ್:ಟ್ರಂಪ್ ಅವರು ಕಿರ್ಕ್ ಅವರನ್ನು ಸತ್ಯ, ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ. ‘ಕಿರ್ಕ್ ಅವರೊಬ್ಬ ಅತ್ಯುತ್ತಮ ಮತ್ತು ಐತಿಹಾಸಿಕ ವ್ಯಕ್ತಿ’ ಎಂದು ಬಣ್ಣಸಿದ್ದಾರೆ.