ಸಾರಾಂಶ
ನವದೆಹಲಿ : ವಿಸ್ತೃತವಾದ, ಸಾಂವಿಧಾನಿಕ ಪೀಠವೊಂದು ನೀಡಿದ ತೀರ್ಪಿಗೆ ಅದಕ್ಕಿಂತ ಕಡಿಮೆ ನ್ಯಾಯಮೂರ್ತಿಗಳನ್ನು ಹೊಂದಿರುವ ಪೀಠಗಳು ಬದ್ಧವಾಗಿರಬೇಕು.
ಅದಕ್ಕೆ ವ್ಯತಿರಿಕ್ತ ತೀರ್ಪನ್ನು ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಇದೇ ವೇಳೆ, ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ಬದಿಗೊತ್ತಿ 2 ವರ್ಷಗಳ ಹಿಂದೆ ದ್ವಿ ಸದಸ್ಯ ನ್ಯಾಯಪೀಠವೊಂದು ನೀಡಿದ್ದ ಆದೇಶವನ್ನು ವಾಪಸ್ ಪಡೆದುಕೊಂಡಿದೆ.
ಸಮುದಾಯದ ಬಳಕೆಗೆಂದು ಗ್ರಾಮಸ್ಥರು ಹೊಂದಿರುವ ಅನುಪಯುಕ್ತ ಜಾಗವನ್ನು ಮೂಲ ಮಾಲೀಕರಿಗೆ ಹಂಚಬೇಕು ಎಂದು 1967ರಲ್ಲಿ ಸುಪ್ರೀಂಕೋರ್ಟ್‌ನ ಪಂಚಸದಸ್ಯ ಸಾಂವಿಧಾನಿಕ ಪೀಠ ಭಗತ್ ರಾಮ್ ಪ್ರಕರಣದಲ್ಲಿ ತೀರ್ಪು ನೀಡಿತ್ತು. ಆದರೆ 2022ರ ಏಪ್ರಿಲ್‌ನಲ್ಲಿ ಹರ್ಯಾಣ ಭೂ ವಿವಾದವೊಂದಕ್ಕೆ ಸಂಬಂಧಿಸಿದಂತೆ 1967ರ ತೀರ್ಪಿಗೆ ವ್ಯತಿರಿಕ್ತವಾಗಿ ದ್ವಿಸದಸ್ಯ ಪೀಠ ತೀರ್ಪು ನೀಡಿತ್ತು.
ಸಾಮಾನ್ಯ ಉದ್ದೇಶಕ್ಕಾಗಿ ಮೀಸಲಾದ ಇಡೀ ಜಾಗವನ್ನು ಗ್ರಾಮ ಪಂಚಾಯಿತಿ ಪ್ರಸಕ್ತ ಹಾಗೂ ಭವಿಷ್ಯದ ಅಗತ್ಯಗಳಿಗೆ ಬಳಸಿಕೊಳ್ಳಬೇಕು. ಅದನ್ನು ಮಾಲೀಕರಿಗೆ ಹಂಚಕೂಡದು ಎಂದು ಹೇಳಿತ್ತು. ಈ ತೀರ್ಪನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠ ವಾಪಸ್ ಪಡೆದಿದೆ.