ಕಾಂಗ್ರೆಸ್‌ ಪರಂಪರೆ ಗೌರವಿಸಲಿಲ್ಲ: ಮೋದಿ ವಾಗ್ದಾಳಿ

| Published : Mar 13 2024, 02:00 AM IST

ಕಾಂಗ್ರೆಸ್‌ ಪರಂಪರೆ ಗೌರವಿಸಲಿಲ್ಲ: ಮೋದಿ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದಿನ ಸರ್ಕಾರಗಳು ಸಾಬರಮತಿ ಆಶ್ರಮ ಸೇರಿದಂತೆ ಚಾರಿತ್ರಿಕ ತಾಣಗಳು ಹಾಗೂ ಪರಂಪರೆಯನ್ನೇ ಗೌರವಿಸುತ್ತಿರಲಿಲ್ಲ.

ಅಹಮದಾಬಾದ್‌: ಈ ಹಿಂದಿನ ಸರ್ಕಾರಗಳು ಸಾಬರಮತಿ ಆಶ್ರಮ ಸೇರಿದಂತೆ ಚಾರಿತ್ರಿಕ ತಾಣಗಳು ಹಾಗೂ ಪರಂಪರೆಯನ್ನೇ ಗೌರವಿಸುತ್ತಿರಲಿಲ್ಲ. ಪರಂಪರೆ ಗೌರವಿಸದ ದೇಶವು ಭವಿಷ್ಯವನ್ನು ಕಳೆದುಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ಗೆ ಟಾಂಗ್‌ ನೀಡಿದ್ದಾರೆ.

ಗುಜರಾತನ ಅಹಮದಾಬಾದ್ ನಗರದ ಸಾಬರಮತಿಯಲ್ಲಿ 1,200 ಕೋಟಿ ರು.ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರು ಗಾಂಧಿ ಆಶ್ರಮ ಸ್ಮಾರಕದ ಮಾಸ್ಟರ್‌ಪ್ಲಾನ್‌ಗೆ ಚಾಲನೆ ನೀಡಿ ಮತ್ತು ಮಾರ್ಚ್ 12, 1930 ರಂದು ಮಹಾತ್ಮ ಗಾಂಧಿ ಕೈಗೊಂಡ ಉಪ್ಪಿನ ಮೆರವಣಿಗೆ ವಾರ್ಷಿಕೋತ್ಸವ ಸಮಾರಂಭದ ನಿಮಿತ್ತ ಅಭಿವೃದ್ಧಿಪಡಿಸಲಾಗಿರುವ ಕೊಚ್ರಾಬ್ ಆಶ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಬರಮತಿ ಆಶ್ರಮವು ದೇಶಕ್ಕೆ ಮಾತ್ರವಲ್ಲದೆ ಇಡೀ ಮನುಕುಲದ ಪರಂಪರೆಯಾಗಿದ್ದು, ವಿಕಸಿತ ಭಾರತ ಯಾತ್ರೆಯಾಗಿದೆ. ಸ್ವಾತಂತ್ರ್ಯಾ ನಂತರ ರಚನೆಯಾದ ಸರ್ಕಾರಕ್ಕೆ ಸಾಬರಮತಿ ಆಶ್ರಮದಂತಹ ಪಾರಂಪರಿಕ ತಾಣಗಳನ್ನು ಉಳಿಸಿಕೊಳ್ಳುವ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ ಎಂದು ಟೀಕಿಸಿದರು.

ವಿದೇಶಿ ಮಸೂರದಿಂದ ಭಾರತವನ್ನು ನೋಡುವುದು ಮತ್ತು ತುಷ್ಟೀಕರಣ ರಾಜಕೀಯ ಪರಂಪರೆಯ ನಾಶಕ್ಕೆ ಕಾರಣವಾಯಿತು. ಸರ್ಕಾರದ ವೋಕ್‌ ಫಾರ್‌ ಲೋಕಲ್‌ (ಸ್ಥಳೀಯ ವಸ್ತುಗಳಿಗೆ ಆದ್ಯತೆ) ಅಭಿಯಾನವು ಮಹಾತ್ಮ ಗಾಂಧಿ ಅವರ ಸ್ವದೇಶಿ ಕಲ್ಪನೆಯ ಅಳವಡಿಕೆಯಾಗಿದೆ ಎಂದು ಹೇಳಿದರು.