ಸಾರಾಂಶ
ನವದೆಹಲಿ: ಕಳೆದ ತಿಂಗಳ ಅಂತ್ಯದಲ್ಲಿ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಂತ್ರಸ್ತರಾದವರಿಗೆ ‘ಆಪರೇಶನ್ ಬ್ರಹ್ಮ’ದ ಭಾಗವಾಗಿ ಮಾನವೀಯ ನೆರವು ನೀಡಲು ತೆರಳುತ್ತಿದ್ದ ಭಾರತೀಯ ವಾಯುಪಡೆಯ ವಿಮಾನಗಳ ಜಿಪಿಎಸ್ ಸ್ಪೂಫ್ ಮಾಡುವ ಮೂಲಕ ಸೈಬರ್ ದಾಳಿ ಮಾಡಿದ್ದ ವಿಷಯ ಬೆಳಕಿಗೆ ಬಂದಿದೆ.
ಸಿ-130ಜೆ, ಸಿ-17 ಗ್ಲೋಬ್‌ಮಾಸ್ಟರ್ ಸೇರಿದಂತೆ 6 ಸೇನಾ ವಿಮಾನಗಳನ್ನು ಮ್ಯಾನ್ಮಾರ್‌ಗೆ ರವಾನಿಸಲಾಗಿತ್ತು. ಮಾ.29ರಂದು ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನವು ಮ್ಯಾನ್ಮಾರ್ ಗಡಿಯೊಳಗಿದ್ದಾಗ ಮೊದಲ ಸ್ಪೂಫಿಂಗ್ ನಡೆದಿದೆ. ಬಳಿಕ ಹಲವು ವಿಮಾನಗಳ ಮೇಲೆಯೂ ಇದೇ ಮಾದರಿಯಲ್ಲಿ ಸೈಬರ್ ದಾಳಿ ನಡೆಸಲಾಗಿದೆ. ಪರಿಣಾಮವಾಗಿ ಪೈಲೆಟ್‌ಗಳು ಜಿಪಿಎಸ್ ಸಹಾಯವಿಲ್ಲದೆ ಸೆನ್ಸಾರ್‌ಗಳ ಆಧಾರದಲ್ಲಿ ವಿಮಾನ ಚಾಲನೆ ಮಾಡಬೇಕಾಯಿತು. ಅತ್ತ ಅನ್ಯ ವಿಮಾನಗಳಿಗೆ ಎಚ್ಚರಿಕೆ ರವಾನಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಸೇನೆ ಮಾಹಿತಿ ನೀಡಿದೆ. ಪ್ರಾದೇಶಿಕ ವಿರೋಧಿಗಳಿಂದ ಈ ಕೃತ್ಯ ನಡೆದಿದೆ ಎಂದ ಶಂಕೆ ಇದೆ.
ಸ್ಪೂಫಿಂಗ್ ಎಂದರೇನು?
ಸ್ಪೂಫಿಂಗ್ ಎಂದರೆ, ನಕಲಿ ರೇಡಿಯೋ ಸಿಗ್ನಲ್‌ಗಳನ್ನು ರವಾನಿಸುವ ಮೂಲಕ ವಿಮಾನಗಳ ದಾರಿ ತಪ್ಪಿಸುವುದು.