ಗ್ಯಾಂಗ್‌ಸ್ಟರ್‌ ದಾವೂದ್‌ ಇಬ್ರಾಹಿಂ ಸಹಚರ ದಾನಿಶ್‌ ಚಿಕ್ನಾ ಡ್ರಗ್ಸ್‌ ಪ್ರಕರಣದಲ್ಲಿ ಬಂಧನ

| Published : Dec 16 2024, 12:47 AM IST / Updated: Dec 16 2024, 05:45 AM IST

ಗ್ಯಾಂಗ್‌ಸ್ಟರ್‌ ದಾವೂದ್‌ ಇಬ್ರಾಹಿಂ ಸಹಚರ ದಾನಿಶ್‌ ಚಿಕ್ನಾ ಡ್ರಗ್ಸ್‌ ಪ್ರಕರಣದಲ್ಲಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

 ಗ್ಯಾಂಗ್‌ಸ್ಟರ್‌ ದಾವೂದ್‌ ಇಬ್ರಾಹಿಂ ಸಹಚರ ದಾನಿಶ್‌ ಚಿಕ್ನಾನನ್ನು ಡ್ರಗ್ಸ್‌ ಪ್ರಕರಣದಲ್ಲಿ ಶುಕ್ರವಾರ ಬಂಧಿಸಲಾಗಿದೆ. ಈತ ಮುಂಬೈನಲ್ಲಿ ದಾವೂದ್‌ರ ಡ್ರಗ್ಸ್‌ ದಂಧೆ ನೋಡಿಕೊಳ್ಳುತ್ತಿದ್ದ.

ಮುಂಬೈ: ಗ್ಯಾಂಗ್‌ಸ್ಟರ್‌ ದಾವೂದ್‌ ಇಬ್ರಾಹಿಂ ಸಹಚರ ದಾನಿಶ್‌ ಚಿಕ್ನಾನನ್ನು ಡ್ರಗ್ಸ್‌ ಪ್ರಕರಣದಲ್ಲಿ ಶುಕ್ರವಾರ ಬಂಧಿಸಲಾಗಿದೆ. ಈತ ಮುಂಬೈನಲ್ಲಿ ದಾವೂದ್‌ರ ಡ್ರಗ್ಸ್‌ ದಂಧೆ ನೋಡಿಕೊಳ್ಳುತ್ತಿದ್ದ.

ಈತನ ಜತೆಗೆ, ಖಾದರ್ ಗುಲಾಮ್ ಶೇಖ್‌ ಎಂಬಾತನನ್ನೂ ಮುಂಬೈ ಪೊಲೀಸರು ಬಂಧಿಸಿದ್ದಾರೆ. 

ಪತ್ತೆ ಹೇಗೆ?:ನ.8ರಂದು ಮೊಹಮ್ಮದ್‌ ಆಶಿಕುರ್‌ ಶಹಿದುರ್‌ ರಹಮಾನ್‌ ಎಂಬಾತ 144 ಗ್ರಾಂ ಡ್ರಗ್ಸ್‌ ಜತೆ ಮರೈನ್ ಲೈನ್ಸ್‌ನಲ್ಲಿ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ ಅದನ್ನು ಡೋಂಗ್ರಿಯ ರೆಹಾನ್‌ ಶಕೀಲ್‌ ಅನ್ಸಾರಿಯಿಂದ ಪಡೆದಿದ್ದಾಗಿ ಬಾಯ್ಬಿಟ್ಟಿದ್ದ. ಅನ್ಸಾರಿಯ ಬೆನ್ನು ಹತ್ತಿದ ಪೊಲೀಸರು ಆತನಲ್ಲಿದ್ದ 55 ಗ್ರಾಂ ಡ್ರಗ್ಸ್‌ ಜಪ್ತಿ ಮಾಡಿದ್ದರು. ಆಗ ಆತ ದಾನಿಶ್‌ ಹಾಗೂ ಆತನ ಇನ್ನೊಬ್ಬ ಸಹಚರ ಕಾದಿರ್‌ ಫಾಂಟಾನಿಂದ ಡ್ರಗ್ಸ್‌ ಪೂರೈಕೆ ಆಗಿದೆ ತಿಳಿಸಿದ್ದ.

ಇದರ ಜಾಡು ಹಿಡಿದು ದಾನಿಶ್‌ ಹಾಗೂ ಫಾಂಟಾನನ್ನು ಡಿ.13ರಂದು ಡೋಂಗ್ರಿಯಲ್ಲಿ ಬಂಧಿಸಲಾಗಿದ್ದು, ಈ ವೇಳೆ ಅವರಿಬ್ಬರು ಡ್ರಗ್ಸ್‌ ದಂಧೆಯಲ್ಲಿ ತೊಡಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಶಬರಿಮಲೆ: ಕಳೆದ ಸಲಕ್ಕಿಂತ 4.5 ಲಕ್ಷ ಹೆಚ್ಚು ಭಕ್ತರ ಭೇಟಿ

ತಿರುವನಂತಪುರ: ಕಳೆದ 29 ದಿನಗಳಲ್ಲಿ ಶಬರಿಮಲೆಗೆ ಸುಮಾರು 22 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ 4.51 ಲಕ್ಷ ಹೆಚ್ಚು ಭಕ್ತರು ಅಯ್ಯಪ್ಪನ ದರ್ಶನ ಪಡೆದಂತಾಗಿದೆ.ಈ ಬಾರಿ ದೇಗುಲದ ಬಾಗಿಲು ತೆರೆದಂದಿನಿಂದ ಡಿ.14ರವರೆಗೆ ಅಂದರೆ 29 ದಿನಗಳ ವರೆಗೆ ಸುಮಾರು 22.67 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ದೇಗುಲದ ಆದಾಯ ಕೂಡ ಈ ಅವಧಿಯಲ್ಲಿ 22.76 ಕೋಟಿ ರು.ನಷ್ಟು ಹೆಚ್ಚಾಗಿದೆ ಎಂದು ತಿರುವಂಕೂರು ದೇವಸ್ವಂ ಮಂಡಳಿ ತಿಳಿಸಿದೆ.

ಈ ಬಾರಿ ಪ್ರಸಾದ ಮತ್ತಿತರ ರೂಪದಲ್ಲಿ ದೇಗುಲಕ್ಕೆ 163.89 ಕೋಟಿ ರು. ಆದಾಯ ಬಂದಿದ್ದು, ಇದರಲ್ಲಿ ಅರವಣ ಪ್ರಸಾದದ ಮಾರಾಟವೊಂದರಿಂದಲೇ 82.67 ಕೋಟಿ ಆದಾಯ ಸಂಗ್ರಹವಾಗಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ 17.41 ಕೋಟಿ ರು.ನಷ್ಟು ಹೆಚ್ಚು. ಕಳೆದ ವರ್ಷ ಇದೇ ಅವಧಿಯಲ್ಲಿ ಅರವಣ ಪ್ರಸಾದದಿಂದ 65.26 ಕೋಟಿ ಆದಾಯ ಬಂದಿತ್ತು.

ಉಪವಾಸ ನಿರತ ರೈತ ನಾಯಕ ದಲ್ಲೇವಾಲ್‌ ಮನವೊಲಿಕೆ ಯತ್ನ

ಚಂಡೀಗಢ: ಸುಪ್ರೀಂ ಕೋರ್ಟ್‌ ನಿರ್ದೇಶನ ಬೆನ್ನಲ್ಲೇ 20 ದಿನಗಳಿಂದ ಆಮರಣಾಂತ ನಿರಶನ ನಡೆಸುತ್ತಿರುವ ರೈತ ಮುಖಂಡ ಜಗಜಿತ್‌ ಸಿಂಗ್‌ ದಲ್ಲೇವಾಲ ಅವರನ್ನು ಭೇಟಿಯಾದ ಪಂಜಾಬ್ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ಹೋರಾಟ ಕೈಬಿಡುವಂತೆ ಮನವೊಲಿಕೆಗೆ ಯತ್ನಿಸಿದ್ದಾರೆ.ಪಂಜಾಬ್‌ ಪೊಲೀಸ್‌ ಮಹಾ ನಿರ್ದೇಶಕ ಗೌರವ್‌ ಯಾದವ್‌ ಮತ್ತು ಕೇಂದ್ರ ಗೃಹ ಇಲಾಖೆ ನಿರ್ದೇಶಕ ಮಾಯಾಂಕ್‌ ಮಿಶ್ರಾ ಭಾನುವಾರ ಕನೌರಿ ಗಡಿಗೆ ಭೇಟಿ ನೀಡಿ ದಲ್ಲೇವಾಲರ ಆರೋಗ್ಯ ವಿಚಾರಿಸಿದರು. ನಿಮ್ಮ ಆರೋಗ್ಯ ಮುಖ್ಯ ಎಂದು ತಿಳಿಹೇಳಿದ ಅಧಿಕಾರಿಗಳು, ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವ ಕುರಿತು ಚರ್ಚೆ ನಡೆಸಿದರು.

''''ದಲ್ಲೇವಾಲ ಹೇಳಿದ್ದನ್ನು ನಾವು ಸಾವಧಾನದಿಂದ ಆಲಿಸಿದ್ದೇವೆ. ಸುಪ್ರೀಂ ಕೋರ್ಟ್‌ ಸೂಚನೆಯಂತೆ ನಾವು ಬಂದಿದ್ದೇವೆ. ದಲ್ಲೇವಾಲ ಅವರ ಶಾಂತಿಯುತ ಹೋರಾಟಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸರ್ಕಾರ ಕೂಡ ಈ ಕುರಿತು ಗಮನಹರಿಸುತ್ತಿದೆ'''' ಎಂದು ಅಧಿಕಾರಿಗಳು ತಿಳಿಸಿದರು.ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕ್ಯಾನ್ಸರ್‌ ಪೀಡಿತ 70 ವರ್ಷದ ಪಂಜಾಬ್‌ ರೈತ ಮುಖಂಡ ದಲ್ಲೇವಾಲ ನ.26ರಿಂದ ಆಮರಣಾಂತ ನಿರಶನ ಕೂತಿದ್ದಾರೆ. ಅವರ ಆರೋಗ್ಯ ಕುರಿತು ಇತ್ತೀಚೆಗಷ್ಟೇ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌ ಮನವೊಲಿಕೆಗೆ ಅಧಿಕಾರಿಗಳನ್ನು ಕಳುಹಿಸುವಂತೆ ಸೂಚಿಸಿತ್ತು.

ಗಾಯಾಳು ಪತ್ರಕರ್ತನ ಭೇಟಿ: ನಟ ಮೋಹನ್‌ ಬಾಬು ಕ್ಷಮೆಯಾಚನೆ

ಹೈದರಾಬಾದ್‌: ತಮ್ಮ ನಿವಾಸದಲ್ಲಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ನಟ ಮೋಹನ್‌ ಬಾಬು ಭಾನುವಾರ ಆಸ್ಪತ್ರೆಗೆ ತೆರಳಿ, ಗಾಯಗೊಂಡಿರುವ ಪತ್ರಕರ್ತನನ್ನು ಭೇಟಿಯಾಗಿ ಕ್ಷಮೆ ಯಾಚಿಸಿದ್ದಾರೆ.ಈ ಕುರಿತು ಮಾತನಾಡಿದ ಗಾಯಾಳು ಪತ್ರಕರ್ತ ರಂಜಿತ್‌ ಕುಮಾರ್‌, ‘ಬಾಬು ಹಾಗೂ ಅವರ ಹಿರಿಯ ಪುತ್ರ ವಿಷ್ಣು ನನ್ನ ಮೇಲಿನ ಹಲ್ಲೆಯನ್ನು ದುರದೃಷ್ಟಕರ ಎಂದಿದ್ದು, ನನಗೆ, ನನ್ನ ಪರಿವಾರ ಹಾಗೂ ಎಲ್ಲಾ ಪತ್ರಕರ್ತರ ಬಳಿ ಕ್ಷಮೆ ಯಾಚಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ನನ್ನ ಮನೆಗೂ ಬರುವ ಭರವಸೆ ನೀಡಿದ್ದಾರೆ’ ಎಂದರು.

ಅತ್ತ ಟಿವಿ9 ಚಾನಲ್‌ಗೂ ಪತ್ರ ಬರೆದ ಬಾಬು ಕ್ಷಮೆ ಕೇಳಿದ್ದಾರೆ. ಈ ಕೇಸಿನಲ್ಲಿ ಬಾಬು ಅವರ ನಿರೀಕ್ಷಣಾ ಜಾಮೀನು ವಜಾ ಆಗಿದ್ದು, ಬಂಧನದ ಭೀತಿಯಲ್ಲಿದ್ದಾರೆ.

ದಿಲ್ಲಿಯಲ್ಲಿ ಕೇಜ್ರಿ ವರ್ಸಸ್ ಸಂದೀಪ್ ದೀಕ್ಷಿತ್‌

ನವದೆಹಲಿ: ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಆಪ್‌ 38 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಮೂಲಕ ಅವರು ಕಾಂಗ್ರೆಸ್‌ ಹಿರಿಯ ನಾಯಕ ಸಂದೀಪ್‌ ದೀಕ್ಷಿತ್‌ ವಿರುದ್ಧ ಸ್ಪರ್ಧಿಸುವುದು ಪಕ್ಕಾ ಆಗಿದೆ. ಮಾಜಿ ಸಿಎಂ ಶೀಲಾ ದೀಕ್ಷಿತ್‌ ಅವರ ಪುತ್ರ ಸಂದೀಪ್‌ಗೆ ಮೊನ್ನೆಯಷ್ಟೇ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು.ಇನ್ನು ಸಿಎಂ ಆತಿಶಿ ಕಾಲ್ಕಾಜಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಪಕ್ಷದ ಹಿರಿಯ ನಾಯಕರು ಮತ್ತೆ ತಮ್ಮದೇ ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ.

ಸಚಿವರಾದ ಸೌರಭ್‌ ಭಾರದ್ವಾಜ್‌ ಗ್ರೇಟರ್‌ ಕೌಲಾಶ್‌ನಿಂದ, ಗೋಪಾಲ್‌ ರಾಯ್‌ ಬಾಬರ್‌ಪುರ್‌ನಿಂದ, ಇಮ್ರಾನ್‌ ಹುಸೇನ್‌ ಬಲ್ಲೀಮಾರಾನ್‌ನಿಂದ, ರಘಿವಿಂದ್ರ ಶೌಕೀನ್‌ ನಾಂಗಲೋಯಿ ಜಾಟ್‌ನಿಂದ, ಮುಖೇಶ್‌ ಕುಮಾರ್‌ ಅಹ್ಲಾವತ್‌ ಸುಲ್ತಾನ್‌ಪುರ್‌ ಮಜ್ರಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.ಕಳೆದ 3 ಚುನಾವಣೆಗಳಲ್ಲಿ ಗೆದ್ದು ಆಡಳಿತ ನಡೆಸಿದ ಆಪ್‌ಗೆ ಈ ಬಾರಿಯ ಚುನಾವಣೆ ತನ್ನ ಆಡಳಿತ ಮಾದರಿ ಮತ್ತು ಮತದಾರರನ್ನು ಹಿಡಿದಿಟ್ಟುಕೊಂಡ ಪರಿಯ ಪರೀಕ್ಷೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. 2020ರ ಚುನಾವಣೆಯಲ್ಲಿ ಆಪ್‌ 70 ಕ್ಷೇತ್ರಗಳ ಪೈಕಿ 62ಡನ್ನು ತನ್ನದಾಗಿಸಿಕೊಂಡು ಪ್ರಚಂಡ ಬಹುಮತದೊಂದಿಗೆ ಸರ್ಕಾರ ರಚಿಸಿತ್ತು.