ಸಾರಾಂಶ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಹೇಳದೆ ಪೊಲೀಸರಿಗೆ ಶರಣಾಗತಿಯಾಗುವ ನಾಲ್ವರು ಸಹಚರರಿಗೆ ನೀಡುವಂತೆ ಖುದ್ದು ನಟ ದರ್ಶನ್ ತಮ್ಮ ಮನೆಯಲ್ಲೇ 30 ಲಕ್ಷ ರು.ಗಳನ್ನು ನೀಡಿದ್ದರು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ತಾವು ಹಲ್ಲೆ ನಡೆಸಿ ಹೊರಬಂದ ಬಳಿಕ ರೇಣುಕಾಸ್ವಾಮಿ ಸಾವಿನ ಸಂಗತಿ ತಿಳಿದು ಆತಂಕಗೊಂಡ ದರ್ಶನ್, ತಮ್ಮ ಮನೆಗೆ ಆಪ್ತರಾದ ವಿನಯ್, ಪ್ರದೋಷ್ ಹಾಗೂ ದೀಪಕ್‌ನನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದರು.
ಆಗ ತನ್ನ ಹೆಸರು ಪ್ರಕರಣದಲ್ಲಿ ಬಾರದಂತೆ ನೋಡಿಕೊಳ್ಳುವಂತೆ ಹೇಳಿ ಪ್ರದೋಷ್‌ಗೆ 30 ಲಕ್ಷ ರು. ಹಣವನ್ನು ದರ್ಶನ್ ಕೊಟ್ಟಿದ್ದರು. ಈ ಹಣವನ್ನು ಪ್ರದೋಷ್ ಮನೆಯಲ್ಲಿ ಜಪ್ತಿ ಮಾಡಲಾಗಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.ಮೃತದೇಹ ಸಾಗಿಸಿದ ಬಳಿಕ ದರ್ಶನ್ ಮೈಸೂರಿಗೆ ತೆರಳಿ ಪೂಜೆಯಲ್ಲಿ ಭಾಗಿ!ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಿಂದ ಭಾನುವಾರ ನಸುಕಿನಲ್ಲಿ ರೇಣುಕಾಸ್ವಾಮಿ ಮೃತದೇಹ ಸಾಗಿಸಿದ ಬಳಿಕ ಮೈಸೂರಿಗೆ ದರ್ಶನ್ ತೆರಳಿದ್ದರು.
ಮೃತದೇಹ ಸಾಗಿಸುವ ವೇಳೆ ತಮ್ಮ ಮನೆಯಲ್ಲೇ ದರ್ಶನ್ ಇದ್ದರು. ಬಳಿಕ ಮೈಸೂರಿಗೆ ಹೊರಟರು. ಮೈಸೂರಿನಲ್ಲಿ ಸ್ನೇಹಿತರ ಮನೆಯಲ್ಲಿ ನಡೆದ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ‘ಡೆವಿಲ್’ ಚಲನಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮತ್ತಿಬ್ಬರು ಸಹಚರರ ಸೆರೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಆ ಜಿಲ್ಲೆಯ ಡಿವೈಎಸ್ಪಿ ಮುಂದೆ ನಟ ದರ್ಶನ್ ಅವರ ಮತ್ತಿಬ್ಬರು ಸಹಚರರು ಶರಣಾಗಿದ್ದಾರೆ. ಇದರೊಂದಿಗೆ ರೇಣುಕಾಸ್ವಾಮಿ ಕೊಲೆ ಕೃತ್ಯದಲ್ಲಿ ಬಂಧಿತರ ಸಂಖ್ಯೆ 16ಕ್ಕೇರಿಯಾಗಿದೆ.
ನನ್ನನ್ನೂ ಕರೆಸಿಕೊಂಡು ದರ್ಶನ್ ಬೆದರಿಸಿದ್ರು: ನಿರ್ಮಾಪಕ ಅಳಲು
ಕೆಲ ವರ್ಷಗಳ ಹಿಂದೆ ಚಿತ್ರನಟ ದರ್ಶನ್ ನನ್ನನ್ನೂ ಖಾಲಿ ಜಾಗಕ್ಕೆ ಕರೆಸಿಕೊಂಡು ಜೀವ ಬೆದರಿಕೆ ಹಾಕಿದ್ದರು. ನಾನು ಮುನ್ನೆಚ್ಚರಿಕೆಯಿಂದ ಕೆಲ ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದೆ. ಇಲ್ಲವಾದರೆ ನನಗೂ ರೇಣುಕಾಸ್ವಾಮಿಗೆ ಆದ ಗತಿಯೇ ಆಗುತ್ತಿತ್ತು ಎಂದು ಚಿತ್ರ ನಿರ್ಮಾಪಕ ಬಿ.ಭರತ್ ಆರೋಪಿಸಿದ್ದಾರೆ.