ಸಂದೇಶ್‌ಖಾಲಿ ಮಹಿಳೆಯರ ಜತೆ ಮಮತಾ ಪಾದಯಾತ್ರೆ

| Published : Mar 08 2024, 01:47 AM IST / Updated: Mar 08 2024, 09:21 AM IST

ಸಾರಾಂಶ

ಸಂದೇಶ್‌ಖಾಲಿ ಸಂತ್ರಸ್ತ ಮಹಿಳೆಯರೊಂದಿಗೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾದಯಾತ್ರೆ ನಡೆಸಿದರು.

ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಸಂದೇಶ್‌ಖಾಲಿಯ ಸಂತ್ರಸ್ತ ಮಹಿಳೆಯರ ಸಂಕಷ್ಟಗಳನ್ನು ಆಲಿಸಿದ ಮರುದಿನವೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೆಲವು ಸಂತ್ರಸ್ತ ಮಹಿಳೆಯರ ಜೊತೆ ಹೆಜ್ಜೆ ಹಾಕಿ ಅವರಲ್ಲಿ ಭರವಸೆ ತುಂಬಿದ್ದಾರೆ. ಈ ಮೂಲಕ ಮೋದಿಗೆ ತಿರುಗೇಟು ನೀಡಲು ಯತ್ನಿಸಿದ್ದಾರೆ.

ಗುರುವಾರ ಸಂದೇಶ್‌ಖಾಲಿ ಮಹಿಳೆಯರು ಹಾಗೂ ಪಕ್ಷದ ಕಾರ್ಯಕರ್ತೆಯರ ಜತೆ ಪಾದಯಾತ್ರೆ ನಡೆಸಿದ ದೀದಿ ಮಾತನಾಡಿ, ‘ಬಿಜೆಪಿಯು ಪಶ್ಚಿಮ ಬಂಗಾಳದ ಮಹಿಳೆಯರು ಭಯದಲ್ಲಿ ಬದುಕುತ್ತಿದ್ದಾರೆ ಎಂದು ದೇಶಾದ್ಯಂತ ಅಪಪ್ರಚಾರ ಮಾಡುತ್ತಿದ್ದಾರೆ. 

ಆದರೆ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು ಅತ್ಯಂತ ಸುರಕ್ಷಿತವಾಗಿದ್ದಾರೆ ಎಂದು ಈ ಮೂಲಕ ಸಾರಿ ಹೇಳುತ್ತೇನೆ. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದಾಗ ಮೌನ ವಹಿಸಿರುವ ಪ್ರಧಾನಿ ಈಗ ತೋರಿಕೆಗೆ ಸಂದೇಶ್‌ಖಾಲಿ ಸಂತ್ರಸ್ತರನ್ನು ಮಾತನಾಡಿಸಿದ್ದಾರೆ’ ಎಂದು ಆರೋಪಿಸಿದರು.

ಈ ಪಾದಯಾತ್ರೆಯನ್ನು ‘ಮಹಿಳೆಯರಿಗೆ ಅಧಿಕಾರ, ನಮ್ಮ ಅಂಗೀಕಾರ’ ಎಂದು ಘೋಷವಾಕ್ಯದೊಂದಿಗೆ ನಡೆಸಲಾಯಿತು. 

ಮಮತಾ ನೇತೃತ್ವದಲ್ಲಿ ಸಂದೇಶ್‌ಖಾಲಿಯ ಸಂತ್ರಸ್ತರ ಜೊತೆಗೆ ತೃಣಮೂಲ ಕಾಂಗ್ರೆಸ್‌ ಪಕ್ಷದ ಕೆಲ ಮಹಿಳಾ ಸದಸ್ಯರು ಮತ್ತು ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾಗಿರುವ ಪತ್ರಕರ್ತೆ ಸಾಗರಿಕಾ ಘೋಷ್‌ ಕೂಡ ಪಾಲ್ಗೊಂಡು ಗಮನ ಸೆಳೆದರು. 

ಅಭಿಜಿತ್‌ ವಿರುದ್ಧ ಕಿಡಿ: ಟಿಎಂಸಿ ಕಾರ್ಯಕರ್ತರ ಸವಾಲಿಗೆ ನ್ಯಾಯಮೂರ್ತಿಯ ಹುದ್ದೆ ತೊರೆದು ಬಿಜೆಪಿ ಸೇರಿರುವ ಅಭಿಜಿತ್‌ ಗಂಗೋಫಾಧ್ಯಾಯ ಅವರು ಯಾವುದೇ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ನಿಂತರೂ ಅವರನ್ನು ಟಿಎಂಸಿ ಸೋಲಿಸುವುದು ಶತಸಿದ್ಧ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಪ್ರತಿಜ್ಞೆ ಮಾಡಿದರು.