ಕಾಂಗ್ರೆಸ್ಸಿಗೆ ಮುಳುವಾದ ಒಳಜಗಳ, ವಿಪಕ್ಷ ಒಗ್ಗಟ್ಟು ವೈಫಲ್ಯ

| Published : Oct 09 2024, 01:43 AM IST / Updated: Oct 09 2024, 01:44 AM IST

ಕಾಂಗ್ರೆಸ್ಸಿಗೆ ಮುಳುವಾದ ಒಳಜಗಳ, ವಿಪಕ್ಷ ಒಗ್ಗಟ್ಟು ವೈಫಲ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಬಹುದು ಎಂಬ ಊಹೆ ಸುಳ್ಳಾಗಿದೆ. ಬಹುತೇಕ ಸಮೀಕ್ಷೆಗಳು ಹಾಗೂ ರಾಜಕೀಯ ಪಂಡಿತರು ಆಡಳಿತ ವಿರೋಧಿ ಅಲೆಯ ಮುನ್ಸೂಚನೆ ನೀಡಿದ್ದರು. ಅದರೆ ಅದೆಲ್ಲ ತಲೆಕೆಳಗಾಗಿದೆ.

ಚಂಡೀಗಢ: ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಬಹುದು ಎಂಬ ಊಹೆ ಸುಳ್ಳಾಗಿದೆ. ಬಹುತೇಕ ಸಮೀಕ್ಷೆಗಳು ಹಾಗೂ ರಾಜಕೀಯ ಪಂಡಿತರು ಆಡಳಿತ ವಿರೋಧಿ ಅಲೆಯ ಮುನ್ಸೂಚನೆ ನೀಡಿದ್ದರು. ಅದರೆ ಅದೆಲ್ಲ ತಲೆಕೆಳಗಾಗಿದೆ. ಕಾಂಗ್ರೆಸ್‌ ಏಕೆ ಸೋತಿತು ಎಂಬ ಕಾರಣಗಳನ್ನು ಅವಲೋಕಿಸುತ್ತ ಹೋದರೆ ಪಕ್ಷದಲ್ಲಿನ ಒಳಜಗಳ, ಕಾಂಗ್ರೆಸ್‌ ಗೆದ್ದರೆ ಸಿಎಂ ಅಭ್ಯರ್ಥಿ ಯಾರು ಎಂಬ ಗೊಂದಲ, ಆಪ್‌ ಹಾಗೂ ಜೆಜೆಪಿ ಜತೆ ಮೈತ್ರಿ ಮಾಡಿಕೊಳ್ಳದೇ ಹೋಗಿದ್ದು- ಇವು ಕಾರಣ ಎಂದು ವಿಶ್ಲೇಷಿಸಬಹುದು.ಕಾಂಗ್ರೆಸ್ ಒಳ ಜಗಳ:

2019 ರ ಚುನಾವಣೆಯಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ 31 ಸ್ಥಾನಗಳನ್ನು ಗೆದ್ದಿತ್ತು. ಆದರೆ ಗೆಲುವು ಹೋಗಲಿ- ಆಗಿನಷ್ಟು ಸ್ಥಾನಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಪರದಾಡಿದೆ. ಇದಕ್ಕೆ ಪ್ರಮುಖ ಕಾರಣ ಪಕ್ಷದಲ್ಲಿನ ಆಂತರಿಕ ಕಚ್ಚಾಟ ಮತ್ತು ಅಧಿಕಾರಕ್ಕಾಗಿ ಅದರ ಉನ್ನತ ನಾಯಕರ ಕಿತ್ತಾಟ.

ಚುನಾವಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ಗೆಲುವು ಖಚಿತ ಎಂದು ಹೇಳಿಕೊಂಡು ಮುಖ್ಯಮಂತ್ರಿ ಹುದ್ದೆಗಾಗಿ ಕಸರತ್ತು ಆರಂಭಿಸಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ ಮತ್ತು ಹಿರಿಯ ನಾಯಕಿ ಕುಮಾರಿ ಸೆಲ್ಜಾ ನಡುವಿನ ಅಧಿಕಾರದ ಜಗಳ ತಾರಕಕ್ಕೇರಿತ್ತು. ಒಂದು ಹಂತದಲ್ಲಿ ಸೆಲ್ಜಾ ಅವರು ತಮಗೆ ಸಿಎಂ ಪಟ್ಟ ದೊರಕದು ಎಂಬುದು ಖಚಿತವಾಗಿ ಪ್ರಚಾರದಿಂದಲೇ ದೂರ ಉಳಿದುಬಿಟ್ಟರು. ನಂತರ ಅವರನ್ನು ಹೈಕಮಾಂಡ್‌ ಸಮಾಧಾನಿಸಿದರೂ ಪರಿಸ್ಥಿತಿ ಕೈಮೀರಿ ಹೋಗಿತ್ತು.ಅಭ್ಯರ್ಥಿಗಳು ಅಥವಾ ಮೈತ್ರಿಗಳನ್ನು ನಿರ್ಧರಿಸುವಲ್ಲಿ ಹೂಡಾ ಅವರಿಗೆ ಮುಕ್ತ ಹಸ್ತವನ್ನು ನೀಡಲಾಯಿತು. ಇದು ಕೆಲಸ ಮಾಡಲಿಲ್ಲ ಎಂದು ಫಲಿತಾಂಶಗಳು ತೋರಿಸುತ್ತವೆ.

ಆಪ್‌, ಜೆಜೆಪಿ ಜತೆ ಆಗದ ಮೈತ್ರಿ:

ಹರ್ಯಾಣದಲ್ಲಿ ಆಪ್‌ ಹಾಗೂ ದುಷ್ಯಂತ ಚೌಟಾಲಾ ಅವರ ಜೆಜೆಪಿ ತಕ್ಕಮಟ್ಟಿಗೆ ಪ್ರಬಲ ಪಕ್ಷಗಳು. ಇವುಗಳ ಜತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳದೇ ಹಟಕ್ಕೆ ಬಿದ್ದವರಂತೆ ಏಕಾಂಗಿ ಹೋರಾಟಕ್ಕೆ ಇಳಿಯಿತು. ಇದರ ಫಲವಾಗಿ ಬಿಜೆಪಿ ಬದಲು ಕಾಂಗ್ರೆಸ್‌ ಮತಗಳನ್ನೇ ಈ ಪಕ್ಷಗಳು ತಿಂದವು. ಅನೇಕ ಕಡೆ ಕಾಂಗ್ರೆಸ್‌ ಇಂದು 2000-3000 ಮತಗಳಿಂದ ಸೋತಿದೆ. ಇದಕ್ಕೆ ಕಾಂಗ್ರೆಸ್‌ ಪಕ್ಷ ಇತರರ ಜತೆ ಮೈತ್ರಿ ಮಾಡಿಕೊಳ್ಳದ್ದೇ ಪ್ರಮುಖ ಕಾರಣ.ಜಾಟ್ ವಿರೋಧಿ ಬಲವರ್ಧನೆ:

ಹೂಡಾ ನೇತೃತ್ವದ ಕಾಂಗ್ರೆಸ್ ಜಾಟ್ ಮತಗಳ ಮೇಲೆ ಕೇಂದ್ರೀಕರಿಸಿದರೆ, ಬಿಜೆಪಿ ಪರವಾಗಿ ಜಾಟ್-ಯೇತರ ಮತಗಳ ಪ್ರತಿ ಕ್ರೋಡೀಕರಣವು ಸ್ಪಷ್ಟವಾಗಿ ಕಂಡುಬಂದಿದೆ. ಕಾಂಗ್ರೆಸ್‌ ಗೆದ್ದರೆ ಜಾಟ್‌ ಸಮುದಾಯ ಮತ್ತೆ ಈ ಹಿಂದಿನಂತೆ ಪ್ರಾಬಲ್ಯ ಮೆರೆದು ಇತರ ಜನಾಂಗಗಳಿಗೆ ಮುಳುವಾಗಬಹುದು ಎಂಬ ಆತಂಕ ಜಾಟೇತರ ಜಾತಿಗಳಲ್ಲಿ ಮನೆ ಮಾಡಿತ್ತು. ಹೀಗಾಗಿ ಜಾಟ್‌ ನಾಯಕರ ವಿರುದ್ಧ ಇತರ ಸಮುದಾಯಗಳು ಬಿಜೆಪಿ ಪರ ಅಗಾಧ ಮತ ಚಲಾಯಿದ್ದು ಸ್ಪಷ್ಟವಾಗಿದೆ.