ಜಾಹೀರಾತಲ್ಲಿ ದೀಪಿಕಾ ಹಿಜಾಬ್‌ ಧಾರಣೆ: ಟ್ರೋಲ್‌

| Published : Oct 09 2025, 02:02 AM IST

ಜಾಹೀರಾತಲ್ಲಿ ದೀಪಿಕಾ ಹಿಜಾಬ್‌ ಧಾರಣೆ: ಟ್ರೋಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಬುಧಾಬಿಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜಾಹೀರಾತಿನಲ್ಲಿ ನಟಿ ದೀಪಿಕಾ ಪಡುಕೋಣೆ ಹಿಜಾಬ್‌ ಧಾರಿಯಾಗಿ ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ.

ಮುಂಬೈ: ಅಬುಧಾಬಿಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜಾಹೀರಾತಿನಲ್ಲಿ ನಟಿ ದೀಪಿಕಾ ಪಡುಕೋಣೆ ಹಿಜಾಬ್‌ ಧಾರಿಯಾಗಿ ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಜಾಹೀರಾತಿನ ಒಂದು ದೃಶ್ಯದಲ್ಲಿ ಶೇಖ್ ಜಾಯೇದ್ ಗ್ರ್ಯಾಂಡ್ ಮಸೀದಿಯಲ್ಲಿ ದೀಪಿಕಾ ಹಾಗೂ ಅವರ ಪತಿ ರಣವೀರ್‌ ಸಿಂಗ್‌ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿ ದೀಪಿಕಾ ಇಡೀ ಮೈ ಹಾಗೂ ತಲೆ ಮುಚ್ಚುವಂತೆ ಕೆಂಪು ಗೌನ್‌ ಮತ್ತು ಸ್ಕಾರ್ಫ್‌ ಧರಿಸಿರುತ್ತಾರೆ.

ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ‘ಇದು ಬರೀ ಬೂಟಾಟಿಕೆ. ದೀಪಿಕಾರರ ಸ್ತ್ರೀವಾದಿ ಅಭಿಯಾನಗಳೇನಾದವು? ಭಾರತೀಯ ಸಂಪ್ರದಾಯಗಳಿಗೆ ಇಂತಹ ಗೌರವವೇಕೆ ತೋರಿಸುತ್ತಿಲ್ಲ?’ ಎಂದು ಪ್ರಶ್ನಿಸಲಾಗುತ್ತಿದೆ. ಇನ್ನೊಂದಿಷ್ಟು ಜನ, ಅವರಿದ್ದ ಸ್ಥಳದ ಸಂಸ್ಕೃತಿಯನ್ನು ಗೌರವಿಸಿದ್ದಕ್ಕಾಗಿ ನಟಿಯನ್ನು ಮೆಚ್ಚುತ್ತಿದ್ದಾರೆ.

==

₹60 ಕೋಟಿ ಕಟ್ಟಿ, ವಿದೇಶಕ್ಕೆ ಹೋಗಿ: ಶಿಲ್ಪಾಗೆ ಕೋರ್ಟ್ ಷರತ್ತು

ಮುಂಬೈ: ಉದ್ಯಮಿಯೊಬ್ಬರಿಗೆ 60 ಕೋಟಿ ರು. ವಂಚಿಸಿದ ಆರೋಪ ಎದುರಿಸುತ್ತಿರು ನಟಿ ಶೀಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್‌ ಕುಂದ್ರಾ, ಅಷ್ಟೇ ಮೊತ್ತದ ಠೇವಣಿ ಇಟ್ಟರೆ ಮಾತ್ರ ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ಅವರು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವುದಾಗಿ ಬಾಂಬೆ ಹೈಕೋರ್ಟ್‌ ಗೆ ಹೇಳಿದೆ.ವೃತ್ತಿಪರ ಮತ್ತು ವೈಯಕ್ತಿಕ ಉದ್ದೇಶಗಳಿಗಾಗಿ ವಿದೇಶಗಳಿಗೆ ಹೋಗಲು ಅನುಕೂಲವಾಗುವಂತೆ, ತಮ್ಮ ವಿರುದ್ಧ ಹೊರಡಿಸಲಾಗಿರುವ ಲುಕ್‌ಔಟ್‌ ನೋಟಿಸ್‌ಅನ್ನು ರದ್ದುಗೊಳಿಸುವಂತೆ ಕೋರಿ ಶಿಲ್ಪಾ ದಂಪತಿ ಹೈಕೋರ್ಟ್‌ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ। ಶ್ರೀ ಚಂದ್ರಶೇಖರ್‌ ಮತ್ತು ಗೌತಮ್‌ ಅಂಖಡ್‌ ಅವರ ಪೀಠ ಹೀಗೆ ಹೇಳಿದೆ.ಶಿಲ್ಪಾ ಹಾಗೂ ರಾಜ್‌, ಶಾಪಿಂಗ್‌ ವೇದಿಕೆಯಾಗಿರುವ ‘ಬೆಸ್ಟ್‌ ಡೀಲ್‌ ಟಿವಿ’ಯ ಸಹ-ಸಂಸ್ಥಾಪಕರು. ಇವರಿಬ್ಬರು ಉದ್ಯಮಿ ದೀಪಕ್‌ ಕೊಠಾರಿಗೆ ಔದ್ಯಮಿಕ ಉದ್ದೇಶಕ್ಕೆಂದು 60 ಕೋಟಿ ರು. ಸಾಲ ಪಡೆದು ಅನ್ಯ ಕಾರ್ಯಕ್ಕೆ ಬಳಸಿದ್ದರು. ಅಷ್ಟರಲ್ಲೇ ಕಂಪನಿ ದಿವಾಳಿಯಾದ ಕಾರಣ ಸಾಲ ಕಟ್ಟದೇ ವಂಚಿಸಿದ್ದರು ಎಂಬ ಆರೋಪವಿದೆ.

==

ವಿಜಯ್‌ ರಾಜಕೀಯ ಪ್ರವೇಶ ಸ್ವಾಗತಾರ್ಹ: ಶಿವರಾಜಕುಮಾರ್‌

ಆದರೆ ವಿಜಯ್‌ ರ್‍ಯಾಲಿಯಲ್ಲಿ ಕಾಲ್ತುಳಿತ ಘಟನೆ ಹೃದಯ ವಿದ್ರಾವಕ: ಹ್ಯಾಟ್ರಿಕ್‌ ಹೀರೋ

ಪಿಟಿಐ ತೂತ್ತುಕುಡಿ

‘ಸದಾ ಜನರಿಗೆ ಒಳ್ಳೆಯದನ್ನೇ ಮಾಡಲು ಬಯಸುವ ನಟ, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್‌ಗೆ ರಾಜಕಾರಣಕ್ಕೆ ಸ್ವಾಗತ’ ಎಂದು ನಟ ಶಿವರಾಜ್‌ ಕುಮಾರ್‌ ಅವರು ಹೇಳಿದ್ದಾರೆ.ತಮಿಳುನಾಡಿನ ತೂತ್ತುಕುಡಿಯ ತಿರುಚೆಂದೂನಲ್ಲಿರುವ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ‘ನನಗೆ ವಿಜಯ್‌ ಮಾತನಾಡಿದ ರೀತಿ ಇಷ್ಟವಾಯಿತು. ಯಾವುದೇ ಹೆಜ್ಜೆ ಇಟ್ಟರೂ, ಅದನ್ನು ಸಾಕಷ್ಟು ಚಿಂತನೆಯ ನಂತರ ಶಾಂತವಾಗಿ ಮಾಡಬೇಕು ಎಂದು ಒಬ್ಬ ನಟ ಹಾಗೂ ಸಹೋದರನಾಗಿ ಅವರಿಗೆ ಹೇಳಬಯಸುತ್ತೇನೆ’ ಎಂದರು.

ಇದೇ ವೇಳೆ, ಸೆ.27ರಂದು ವಿಜಯ್‌ ರ್‍ಯಾಲಿ ವೇಳೆ ಕರೂರಿನಲ್ಲಿ ಸಂಭವಿಸಿದ್ದ ಕಾಲ್ತುಳಿತ ಘಟನೆಯನ್ನು ಹೃದಯವಿದ್ರಾವಕ ಎನ್ನುತ್ತಾ, ‘ನನಗೆ ಆ ಘಟನೆ ಬಗ್ಗೆ ಸಂಪೂರ್ಣ ವಿವರ ತಿಳಿದಿಲ್ಲ. ಆದರೆ ಅನೇಕರ ಸಾವಿಗೆ ಕಾರಣವಾದ ಆ ಘಟನೆ, ಮನುಷ್ಯನಾದ ನನಗೆ ಬಹಳ ನೋವುಂಟುಮಾಡಿದೆ’ ಎಂದು ಹೇಳಿದರು.

==

ಬೆಂಗಳೂರಲ್ಲಿ ಚಿನ್ನದ ಬೆಲೆ ₹1.27 ಲಕ್ಷ: ಸಾರ್ವಕಾಲಿಕ ದಾಖಲೆ

ನವದೆಹಲಿ: ಬೆಂಗಳೂರಿನಲ್ಲಿ ಶೇ.99.5 ಶುದ್ಧತೆಯ ಚಿನ್ನ 10 ಗ್ರಾಂಗೆ ಸಾರ್ವಕಾಲಿಕ ದಾಖಲೆಯ 1,26,800 ರು.ಗೆ ಏರಿದೆ. ಆಭರಣ ಚಿನ್ನ 1,16,300ಗೆ ತಲುಪಿದೆ. ಬೆಳ್ಳಿಬೆಲೆ ಕೂಡ ಕೆಜಿಗೆ 1,59,500 ರು.ಗೆ ಏರಿಕೆಯಾಗಿದೆ. ಮಂಗಳವಾರ ಇವುಗಳ ಬೆಲೆ ಕ್ರಮವಾಗಿ, 1,25,600 ರು., 1,15,200 ರು., 1,58,800 ರು. ಇತ್ತು.ಇನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಶೇ.99.5 ಶುದ್ಧತೆಯ ಚಿನ್ನ 10 ಗ್ರಾಂಗೆ 2,600 ರು. ಏರಿಕೆಯಾಗಿ 1,26,600 ರು.ಗೆ ಜಿಗಿದಿದೆ. ಆಭರಣ ಚಿನ್ನ 700 ರು. ಏರಿಕೆಯಾಗಿ 1,24,000 ರು.ಗೆ ತಲುಪಿದೆ. ಬೆಳ್ಳಿ ಬೆಲೆ ಕೂಡಾ 3,000 ರು. ಏರಿಕೆಯೊಂದಗೆ 1,57,000 ರು. ದಾಖಲೆ ಬರೆದಿದೆ.

==

ಕಾನ್ಪುರ ಮಸೀದಿ ಬಳಿ ಸ್ಫೋಟ: 6 ಮಂದಿಗೆ ಗಾಯ

ಕಾನ್ಪುರ: ಇಲ್ಲಿನ ಮಸೀದಿಯೊಂದರ ಸನಿಹ ವಾಹನ ನಿಲುಗಡೆ ಸ್ಥಳದಲ್ಲಿ ಬುಧವಾರ ಸಂಜೆ 7.15ಕ್ಕೆ ಸ್ಫೋಟ ಸಂಭವಿಸಿದ್ದು, 6 ಮಂದಿಗೆ ಗಾಯಗಳಾಗಿವೆ. ಸ್ಫೋಟದ ಕಾರಣ ನಿಗೂಢವಾಗಿದ್ದು, ಸ್ಥಳದಲ್ಲಿ ಪೊಲೀಸರು ಹಾಗೂ ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸಿವೆ. ಎನ್‌ಐಎ ಕೂಡ ಸ್ಥಳಕ್ಕೆ ಆಗಮಿಸುವ ಸಾಧ್ಯತೆ ಇದೆ.ಈ ಬಗ್ಗೆ ಪೊಲೀಸರು ಹೇಳಿಕೆ ನೀಡಿ, ‘ಮಿಶ್ರಿ ಬಜಾರ್ ಪ್ರದೇಶದಲ್ಲಿ 2 ಸ್ಕೂಟರ್‌ಗಳನ್ನು ನಿಲ್ಲಿಸಲಾಗಿತ್ತು, ಅದರಲ್ಲಿ ಸ್ಫೋಟ ಸಂಭವಿಸಿದೆ. ಒಬ್ಬ ಮಹಿಳೆ ಸೇರಿದಂತೆ ಒಟ್ಟು 6 ಜನರು ಗಾಯಗೊಂಡಿದ್ದಾರೆ. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ತನಿಖೆ ನಡಸುತ್ತಿದ್ದೇವೆ. ಸ್ಕೂಟರ್ ಮಾಲೀಕರ ವಿಚಾರಣೆ ಮಾಡಲಾಗುತ್ತಿದೆ. ಇದು ಅಪಘಾತವೋ ಅಥವಾ ಪಿತೂರಿಯೋ ಎಂಬುದು ನಂತರವೇ ತಿಳಿಯುತ್ತದೆ’ ಎಂದಿದ್ದಾರೆ.