ಕೃತಕ ಬುದ್ಧಿಮತ್ತೆ ವ್ಯವಸ್ಥೆಯಲ್ಲಿ ಹೊಸ ಅಲೆ : ಭಾರತದಿಂದಲೂ ಶೀಘ್ರ ಡೀಪ್‌ ಸೀಕ್ ಮಾದರಿ ಎಐ

| N/A | Published : Jan 31 2025, 12:46 AM IST / Updated: Jan 31 2025, 05:09 AM IST

ಸಾರಾಂಶ

ಚೀನಾದ ಡೀಪ್‌ಸೀಕ್ ಆ್ಯಪ್‌, ಜಾಗತಿಕ ಕೃತಕ ಬುದ್ಧಿಮತ್ತೆ ವ್ಯವಸ್ಥೆಯಲ್ಲಿ ಹೊಸ ಅಲೆ ಎಬ್ಬಿಸಿರುವ ಹೊತ್ತಿನಲ್ಲೇ, ಭಾರತ ಕೂಡಾ ಶೀಘ್ರವೇ ತನ್ನದೇ ಆದ ಜನರೇಟಿವ್‌ ಎಐ ಮಾಡೆಲ್‌ ಅನ್ನು ಅಭಿವೃದ್ಧಿಪಡಿಸಲಿದೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್‌ ಪ್ರಕಟಿಸಿದ್ದಾರೆ.

ನವದೆಹಲಿ: ಚೀನಾದ ಡೀಪ್‌ಸೀಕ್ ಆ್ಯಪ್‌, ಜಾಗತಿಕ ಕೃತಕ ಬುದ್ಧಿಮತ್ತೆ ವ್ಯವಸ್ಥೆಯಲ್ಲಿ ಹೊಸ ಅಲೆ ಎಬ್ಬಿಸಿರುವ ಹೊತ್ತಿನಲ್ಲೇ, ಭಾರತ ಕೂಡಾ ಶೀಘ್ರವೇ ತನ್ನದೇ ಆದ ಜನರೇಟಿವ್‌ ಎಐ ಮಾಡೆಲ್‌ ಅನ್ನು ಅಭಿವೃದ್ಧಿಪಡಿಸಲಿದೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್‌ ಪ್ರಕಟಿಸಿದ್ದಾರೆ.

ಒಡಿಶಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಐಟಿ ಸಚಿವ ಅಶ್ವಿನಿ ವೈಷ್ಣವ್, ‘ಭಾರತೀಯ ಭಾಷೆ, ಸಂಸ್ಕೃತಿಗಳನ್ನು ಗಮನದಲ್ಲಿಟ್ಟುಕೊಂಡು ಎಐ ಮಾಡೆಲ್ ರಚಿಸಲಾಗುತ್ತದೆ. ನಮ್ಮ ದೇಶ ಮತ್ತು ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ದತ್ತಾಂಶಗಳನ್ನು ರೂಪಿಸಲಾಗುವುದು. 18000 ಗ್ರಾಫಿಕ್‌ ಪ್ರೊಸೆಸಿಂಗ್‌ ಯುನಿಟ್‌ ಒಳಗೊಂಡಿರುವ ಇಂಡಿಯಾ ಎಐ ಕಂಪ್ಯೂಟಿಂಗ್‌ ಬಳಸಿಕೊಂಡು ಹೊಸ ಎಐ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಜೊತೆಗೆ ಎಐ ಸಂಶೋಧನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಹೂಡಿಕೆ ಮಾಡುತ್ತಿದೆ. ಈ ಮೂಲಕ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ವೈಷ್ಣವ್‌ ಹೇಳಿದರು.

ಭಾರತೀಯ ಸರ್ವರ್‌ಗಳಲ್ಲಿ ಡೀಪ್ ಸೀಕ್ ಅಳವಡಿಕೆ

ನವದೆಹಲಿ: ಚೀನಾದ ಡೀಪ್‌ಸೀಕ್‌ನಲ್ಲಿನ ಡೇಟಾ ಸುರಕ್ಷತೆ ಮತ್ತು ಗೌಪ್ಯತೆ ಕಾಳಜಿಗಳನ್ನು ಪರಿಹರಿಸಲು ಡೀಪ್‌ಸೀಕ್ ಓಪನ್ ಸೋರ್ಸ್ ಮಾಡೆಲ್ ಅನ್ನು ಶೀಘ್ರದಲ್ಲೇ ಭಾರತೀಯ ಸರ್ವರ್‌ಗಳಲ್ಲಿ ಅಳವಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ಭದ್ರತಾ ಅಂಶಗಳನ್ನು ಖಚಿತಪಡಿಸಿಕೊಳ್ಳಲು ಯಾವೆಲ್ಲ ಅಪ್ಲಿಕೇಶನ್ ಅಥವಾ ಸಿಸ್ಟಮ್‌ಗಳನ್ನು ಪರೀಕ್ಷಿಸಬೇಕೋ ಅವನ್ನು ಪರೀಕ್ಷಿಸಲಾಗುವುದು ಮತ್ತು ಬಳಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

ಡೀಪ್‌ ಸೀಕ್‌ಗೆ ಅಮೆರಿಕದ ನೌಕಾಪಡೆ ನಿರ್ಬಂಧ

ನವದೆಹಲಿ: ಚೀನಾದ ಡೀಪ್‌ಸೀಕ್‌ ಆ್ಯಪ್‌ ಬಳಕೆಗೆ ಅಮೆರಿಕದ ನೌಕಾಪಡೆ ನಿರ್ಬಂಧ ಹೇರಿದೆ. ದೇಶದ ಭದ್ರತೆಯ ಕಾರಣಕ್ಕೆ ಈ ಚೀನಿ ಎಐನ್ನು ಬಳಸದಂತೆ ನೌಕಾಪಡೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇತ್ತ ಟ್ರಂಪ್ ಇಂದೊಂದು ಎಚ್ಚರಿಕೆ ಕರೆ ಎಂದಿದ್ದಾರೆ. ಭದ್ರತೆ ಮತ್ತು ನೈತಿಕ ಕಾಳಜಿಯ ಕಾರಣದಿಂದ ಡೀಪ್‌ ಸೀಕ್ ಬಳಸಬಾರದು ಎಂದು ಸಿಬ್ಬಂದಿಗೆ ಇಮೇಲ್ ಮೂಲಕ ನೌಕಾಪಡೆ ಆದೇಶಿಸಿದೆ. ವೈಯಕ್ತಿಕ ಅಥವಾ ಕೆಲಸಕ್ಕೆ ಸಂಬಂಧಿಸಿದ ವಿಚಾರಗಳೇ ಇರಲಿ ಯಾವುದಕ್ಕೂ ಡೀಪ್‌ಸೀಪ್ ಡೌನ್ಲೋಡ್‌ ಮತ್ತು ಬಳಕೆ ಮಾಡಬಾರದು ಎಂದಿದೆ.