ದೆಹಲಿ ಅಬಕಾರಿ ಹಗರಣ: ಕೇಜ್ರಿಗೆ 5ನೇ ಸಲ ಇ.ಡಿ. ಸಮನ್ಸ್‌

| Published : Feb 01 2024, 02:00 AM IST

ಸಾರಾಂಶ

ಅಬಕಾರಿ ಹಗರಣದಲ್ಲಿ ಫೆ.2ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾರಿ ನಿರ್ದೇಶನಾಲಯ ಐದನೇ ಬಾರಿಗೆ ಸಮನ್ಸ್‌ ನೀಡಿದೆ

ನವದೆಹಲಿ: ದೆಹಲಿಯ ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) 5ನೇ ಬಾರಿ ಸಮನ್ಸ್‌ ಜಾರಿ ಮಾಡಿದೆ. ಈ ಸಲ ಫೆ. 2ಕ್ಕೆ ವಿಚಾರಣೆಗೆ ಬರುವಂತೆ ಹೇಳಿದೆ.

ಈಗಾಗಲೇ ಇ.ಡಿ. ನೀಡಿದ್ದ ನಾಲ್ಕೂ ಸಮನ್ಸ್‌ಗಳಿಗೆ ಚಕ್ಕರ್‌ ಹಾಕಿದ್ದ ಕೇಜ್ರಿವಾಲ್ 5ನೇ ಸಲವಾದರೂ ಹಾಜರಾಗುತ್ತಾರಾ ಕಾದು ನೋಡಬೇಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್‌, ‘ನಾನು ಹಾಜರಾಗುವ ಬಗ್ಗೆ ನಮ್ಮ ಕಾನೂನು ತಂಡ ತೀರ್ಮಾನ ಕೈಗೊಳ್ಳಲಿದೆ’ ಎಂದಿದ್ದಾರೆ.

ಕಳೆದ ಜ.18ರಂದು ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ಗೆ ಇ.ಡಿ ನಾಲ್ಕನೇ ನೋಟಿಸ್‌ ನೀಡಿತ್ತು. ಆದರೆ ಮೂರು ದಿನಗಳ ಕಾಲ ಅವರು ಗೋವಾ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ಆಪ್ ಹೇಳಿತ್ತು. ಅಲ್ಲದೇ ಕೇಜ್ರಿವಾಲ್‌ ತಪ್ಪಿತಸ್ಥರಲ್ಲ ಎಂದು ಹಿಂದಿನಿಂದಲೂ ಆಪ್‌ ನಾಯಕರು ಇ.ಡಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ.