ಸಾರಾಂಶ
ಬಹುನಿರೀಕ್ಷಿತ ದಿಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಫೆ.5ರಂದು ಏಕಹಂತದ ಮತದಾನ ನಡೆಯಲಿದೆ ಹಾಗೂ ಫೆ.8ರಂದು ಫಲಿತಾಂಶ ಘೋಷಣೆ ಆಗಲಿದೆ.
ನವದೆಹಲಿ : ಬಹುನಿರೀಕ್ಷಿತ ದಿಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಫೆ.5ರಂದು ಏಕಹಂತದ ಮತದಾನ ನಡೆಯಲಿದೆ ಹಾಗೂ ಫೆ.8ರಂದು ಫಲಿತಾಂಶ ಘೋಷಣೆ ಆಗಲಿದೆ.
ಆಡಳಿತಾರೂಢ ಆಮ್ ಆದ್ಮಿ ಪಕ್ಷ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಇಲ್ಲಿ ತ್ರಿಕೋನ ಕದನ ಏರ್ಪಟ್ಟಿದೆ. ಈ ಬಾರಿಯ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಸತತ 3ನೇ ಅವಧಿಗೆ ಅಧಿಕಾರ ಹಿಡಿಯುವ ಪ್ರಯತ್ನ ನಡೆಸುತ್ತಿದ್ದರೆ, ಪ್ರತಿಪಕ್ಷ ಬಿಜೆಪಿ ತಿರುಗೇಟು ನೀಡಲು ಮುಂದಾಗಿದೆ. ಲೋಕಸಭೆ ಚುನಾವಣೆಯಲ್ಲಿ ತನ್ನ ಮಿತ್ರಪಕ್ಷವಾದ ಆಪ್ ವಿರುದ್ಧವೇ ಈಗ ಕಾಂಗ್ರೆಸ್ ಸಣೆಸುತ್ತಿದ್ದು, ಬಿಜೆಪಿ ಹಾಗೂ ಆಪ್ ಎರಡರ ವಿರುದ್ಧವೂ ಹೋರಾಡುತ್ತಿದೆ. ಫಲಿತಾಂಶದ ಬಳಿಕ ದಿಲ್ಲಿಯಲ್ಲಿ 8ನೇ ವಿಧಾನಸಭೆ ರಚನೆಯಾಗಲಿದೆ.
1.55 ಕೋಟಿ ಮತದಾರರು:
ಮತದಾನದ ದಿನಾಂಕ ಘೋಷಣೆ ಮಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ‘ದೆಹಲಿ 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಫೆ.5 ರಂದು ಮತದಾನ ನಡೆಯಲಿದೆ. 1.55 ಕೋಟಿಗೂ ಹೆಚ್ಚು ದೆಹಲಿ ಮತದಾರರು ಮತ ಚಲಾಯಿಸಲಿದ್ದಾರೆ ಮತ್ತು ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ’ ಎಂದರು.
70 ಕ್ಷೇತ್ರಗಳಲ್ಲಿ 12 ಮೀಸಲು ಕ್ಷೇತ್ರಗಳಾಗಿವೆ. 13,033 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.
ನಾಮಪತ್ರ ಸಲ್ಲಿಸಲು ಜನವರಿ 17 ಕೊನೆಯ ದಿನವಾಗಿದ್ದು, ಉಮೇದುವಾರಿಕೆ ಹಿಂಪಡೆಯಲು ಜ.20 ಕಡೆಯ ದಿನ. ವೇಳಾಪಟ್ಟಿಯ ಘೋಷಣೆಯಾದ ತಕ್ಷಣವೇ ರಾಷ್ಟ್ರ ರಾಜಧಾನಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.
ಇವಿಎಂ ಪರವಾಗಿ 42 ಸಲ ಕೋರ್ಟ್ ತೀರ್ಪು; ಡೌಟ್‌ಗೆ ಆಯೋಗ ಕಿಡಿ
ನವದೆಹಲಿ: ಇವಿಎಂಗಳನ್ನು ತಿರುಚಲಾಗುತ್ತಿದೆ, ಮತದಾನದ ಅಂಕಿಸಂಖ್ಯೆಗಳಲ್ಲಿ ಆಯೋಗ ಬೇಕೆಂದೇ ಏರುಪೇರು ಮಾಡುತ್ತಿದೆ, ಚುನಾವಣೆ ವೇಳೆ ನಿಷ್ಪಕ್ಷಪಾತ ಕಾರ್ಯನಿರ್ವಹಣೆ ಮಾಡಲ್ಲ ಎಂಬ ಆರೋಪಗಳಿಗೆ ಮುಖ್ಯ ಚುನಾಚಣಾ ಆಯುಕ್ತ ರಾಜೀವ್ ಕುಮಾರ್ ತಿರುಗೇಟು ನೀಡಿದ್ದಾರೆ, ‘ಇವಿಎಂಗಳನ್ನು ಹ್ಯಾಕ್ ಮಾಡಲು ಬರಲ್ಲ ಎಂದು 42 ಸಲ ಕೋರ್ಟುಗಳು ತೀರ್ಪು ನೀಡಿವೆ. ಮತದಾನದ ಅಂಕಿ ಅಂಶಗಳನ್ನು ಏರುಪೇರು ಮಾಡುವ ಪ್ರಶ್ನೆಯೇ ಇಲ್ಲ. ನಮ್ಮಿಂದ ನಿಷ್ಪಕ್ಷಪಾತ ಕೆಲಸ ನಡೆಯುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ವೇಳಾಪಟ್ಟಿ
- ಜ.17: ನಾಮಪತ್ರ ಸಲ್ಲಿಕೆ ಕಡೆಯ ದಿನ
- ಜ.18: ನಾಮಪತ್ರ ಪರಿಶೀಲನೆ
- ಜ.20: ಉಮೇದುವಾರಿಕೆ ವಾಪಸ್‌ಗೆ ಕಡೇ ದಿನ
- ಫೆ.5: ಏಕಹಂತದ ಮತದಾನ
- ಫೆ.8: ಫಲಿತಾಂಶ ಘೋಷಣೆ