ಸಾರಾಂಶ
ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಕೊಡುಗೆಗಳ ವಿರುದ್ಧ ಸ್ವತಃ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರೇ ಹೈಕೋರ್ಟ್ ಮೆಟ್ಟಿಲೇರಿರುವ ಅಚ್ಚರಿಯ ಘಟನೆ ದೆಹಲಿಯಲ್ಲಿ ನಡೆದಿದೆ.
ನವದೆಹಲಿ: ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಕೊಡುಗೆಗಳ ವಿರುದ್ಧ ಸ್ವತಃ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರೇ ಹೈಕೋರ್ಟ್ ಮೆಟ್ಟಿಲೇರಿರುವ ಅಚ್ಚರಿಯ ಘಟನೆ ದೆಹಲಿಯಲ್ಲಿ ನಡೆದಿದೆ. ಆದರೆ ಈ ಕುರಿತ ಅರ್ಜಿ ವಿಚಾರಣೆಗೆ ನಿರಾಕರಿಸಿರುವ ಹೈಕೋರ್ಟ್, ಅರ್ಜಿದಾರರಿಗೆ ಸುಪ್ರೀಂಕೋರ್ಟ್ ಮೆಟ್ಟಿಲೇರುವಂತೆ ಸಲಹೆ ನೀಡಿದೆ.
ಇತ್ತೀಚೆಗೆ ಮುಕ್ತಾಯಗೊಂಡ ದೆಹಲಿ ವಿಧಾನಸಭಾ ಚುನಾವಣೆ ವೇಳೆ ವಿವಿಧ ರಾಜಕೀಯ ಪಕ್ಷಗಳು ನಾನಾ ರೀತಿಯ ಗ್ಯಾರಂಟಿ ಘೋಷಿಸಿದ್ದವು. ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದಿಂಗ್ರಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.ಅರ್ಜಿಯಲ್ಲಿ, ‘ರಾಜಕೀಯ ಪಕ್ಷಗಳ ಇಂತಹ ಭರವಸೆಗಳು ಜನತಾ ಪ್ರಾತಿನಿಧ್ಯ ಕಾಯ್ದೆಯಡಿಯಲ್ಲಿ ಭ್ರಷ್ಟ ಅಭ್ಯಾಸಗಳು. ಈ ಭರವಸೆಗಳ ವಿರುದ್ಧ ತನಿಖೆ ಮಾಡಬೇಕು. ಅವುಗಳನ್ನು ಅಸಾಂವಿಧಾನಿಕ ಎಂದು ಘೋಷಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು. ಅಲ್ಲದೇ ಅರ್ಹ ಮಹಿಳಾ ಮತದಾರರಿಗೆ ಮಾಸಿಕ ಆರ್ಥಿಕ ನೆರವು ನೀಡಲು ಆಪ್ 2,100 ರು., ಕಾಂಗ್ರೆಸ್ ಮತ್ತು ಬಿಜೆಪಿ 2,500ರು. ಘೋಷಿಸಿದ್ದ ಭರವಸೆಗಳು ಲಂಚಕ್ಕೆ ಸಮಾನಪಕ್ಷಗಳು ಮತದಾರರ ವೈಯುಕ್ತಿಕ ಡೇಟಾವನ್ನು ಸಂಗ್ರಹಿಸುವುದನ್ನು ಮತ್ತು ಅವುಗಳನ್ನು ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದನ್ನು ತಡೆಯಬೇಕು’ ಎಂದು ನ್ಯಾ.ದಿಂಗ್ರಾ ಮನವಿ ಮಾಡಿದ್ದರು.
ಆದರೆ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್, ಇದೇ ರೀತಿಯ ಪ್ರಕರಣವು ಈಗಾಲೇ ವಿಚಾರಣೆಗೆ ಬಾಕಿಯಿದ್ದು,ನೀ ಹಿನ್ನೆಲೆಯಲ್ಲಿ ಸುಪ್ರೀಂ ಮೊರೆ ಹೋಗಲು ನಿರ್ದೇಶಿಸಿದೆ.