ಜೈಲಿಗೆ ಕಳಿಸ್ತೇವೆ ಹುಷಾರ್‌: ಆಪ್‌ ಸಚಿವಗೆ ಕೋರ್ಟ್‍ ಎಚ್ಚರಿಕೆ

| Published : Mar 23 2024, 01:08 AM IST / Updated: Mar 23 2024, 08:45 AM IST

ಸಾರಾಂಶ

ಜೈಲಿಗೆ ಕಳಿಸ್ತೇವೆ ಹುಷಾರ್‌ ಎಂದು ಆಪ್‌ ಸಚಿವನಿಗೆ ಕೋರ್ಟ್‍ ಕಿಡಿಕಾರಿದೆ. ದಿಲ್ಲಿ ಆಸ್ಪತ್ರೆಗಳ ವಿಚಾರದಲ್ಲಿ ಮಾತು ಕೇಳದ್ದಕ್ಕೆ ಕಿಡಿಕಾರಿದೆ.

ನವದೆಹಲಿ: ಅಬಕಾರಿ ಹಗರಣ ಸಂಬಂಧ ದೆಹಲಿಯ ಆಪ್‌ ಸರ್ಕಾರದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಂಧನದ ಬೆನ್ನಲ್ಲೇ, ಅವರ ಸಂಪುಟದ ಆರೋಗ್ಯ ಮಂತ್ರಿಯಾಗಿರುವ ಸೌರಭ್‌ ಭಾರದ್ವಾಜ್‌ ಅವರನ್ನು ಜೈಲಿಗೆ ಕಳುಹಿಸುವುದಾಗಿ ದೆಹಲಿ ಹೈಕೋರ್ಟ್‌ ಛೀಮಾರಿ ಹಾಕಿದೆ.

ದೆಹಲಿಯಲ್ಲಿ ಕ್ಲಿನಿಕ್‌ ಹಾಗೂ ಡಯಾಗ್ನೋಸ್ಟಿಕ್‌ ಕೇಂದ್ರಗಳನ್ನು ನಿಯಂತ್ರಿಸುವ ಸಂಬಂಧ ಕೋರ್ಟ್‌ ಆದೇಶವಿದ್ದರೂ ಕಾಯ್ದೆ ಜಾರಿ ಮಾಡದ ಹಿನ್ನೆಲೆಯಲ್ಲಿ ಸೌರಭ್‌ ಭಾರದ್ವಾಜ್‌ ಹಾಗೂ ಆರೋಗ್ಯ ಕಾರ್ಯದರ್ಶಿ ದೀಪಕ್‌ ಕುಮಾರ್‌ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಹೈಕೋರ್ಟ್‌ ಸೂಚನೆ ನೀಡಿತ್ತು. 

ಹಾಜರಾದ ವೇಳೆ ಛೀಮಾರಿ ಹಾಕಿದ ಕೋರ್ಟ್‌, ನೀವು ಸರ್ಕಾರದ ಸೇವಕರು. ದೊಡ್ಡ ಅಹಂ ಬೇಡ. ನಿಮ್ಮಿಬ್ಬರ ಜಗಳದಿಂದಾಗಿ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳಬಾರದು. ನಿಮ್ಮನ್ನು ಜೈಲಿಗೆ ಕಳುಹಿಸಲೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿತು.