70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್‌ ಭಾರತ ಯೋಜನೆ ವಿಮೆ ವಿಸ್ತರಣೆ : ಪ್ರಧಾನಿ ನರೇಂದ್ರ ಮೋದಿ ಚಾಲನೆ

| Published : Oct 30 2024, 12:33 AM IST / Updated: Oct 30 2024, 06:42 AM IST

ಸಾರಾಂಶ

ದೇಶದ ಬಡ ಕುಟುಂಬಗಳಿಗೆ 5 ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮಾ ಸೌಲಭ್ಯವನ್ನು ಕಲ್ಪಿಸುವ ಆಯುಷ್ಮಾನ್‌ ಭಾರತ ಯೋಜನೆಯನ್ನು 70 ವರ್ಷ ಮೇಲ್ಪಟ್ಟ ವೃದ್ಧರಿಗೂ ವಿಸ್ತರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದ್ದಾರೆ.

 ನವದೆಹಲಿ : ದೇಶದ ಬಡ ಕುಟುಂಬಗಳಿಗೆ 5 ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮಾ ಸೌಲಭ್ಯವನ್ನು ಕಲ್ಪಿಸುವ ಆಯುಷ್ಮಾನ್‌ ಭಾರತ ಯೋಜನೆಯನ್ನು 70 ವರ್ಷ ಮೇಲ್ಪಟ್ಟ ವೃದ್ಧರಿಗೂ ವಿಸ್ತರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದ್ದಾರೆ.

ಹಿಂದುಗಳ ಔಷಧ ದೇವರು ಧನ್ವಂತರಿಯ ಜನ್ಮದಿನ ಹಾಗೂ 9ನೇ ಆಯುರ್ವೇದ ದಿನದಂದೇ ದೇಶದ ವೃದ್ಧರಿಗೆ ಮೋದಿ ಅವರು ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸಿದ್ದಾರೆ. ತನ್ಮೂಲಕ, ವಿಮಾ ಸೌಕರ್ಯದಿಂದ ವಂಚಿತರಾಗಿದ್ದ ಬಹುತೇಕ ಜನರಿಗೆ ರಕ್ಷಣೆ ಒದಗಿಸಿದ್ದಾರೆ.

ಇದೇ ವೇಳೆ, 12850 ಕೋಟಿ ರು. ವೆಚ್ಚದ ಆರೋಗ್ಯ ಮೂಲಸೌಕರ್ಯ ಯೋಜನೆಗಳಿಗೂ ಪ್ರಧಾನಿ ಶಂಕುಸ್ಥಾಪನೆ ಅಥವಾ ಉದ್ಘಾಟನೆಯನ್ನು ನೆರವೇರಿಸಿದ್ದಾರೆ.

ಹಾಲಿ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಆಯುಷ್ಮಾನ್‌ ಭಾರತ ಆರೋಗ್ಯ ವಿಮಾ ಯೋಜನೆಯಡಿ 5 ಲಕ್ಷ ರು.ನ ಉಚಿತ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಿದೆ. ಇದನ್ನು ಇದೀಗ 70 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೂ ವಿಸ್ತರಿಸಲಾಗಿದೆ. ಈ ಯೋಜನೆ ವಿಶೇಷವೆಂದರೆ ಈ ಯೋಜನೆಗೆ ಸೇರ್ಪಡೆಯಾಗಲು ಯಾವುದೇ ಆದಾಯ ಮಿತಿ ಇಲ್ಲ. ಕುಟುಂಬದ ಸಮೂಹ ಆರೋಗ್ಯ ವಿಮೆ ಹೊರತಾಗಿ 6 ಕೋಟಿ ಹಿರಿಯ ನಾಗರಿಕರಿಗೆ ಪ್ರತ್ಯೇಕ 5 ಲಕ್ಷ ರು. ವಿಮಾ ಸೌಲಭ್ಯ ಇದರಿಂದ ಸಿಗಲಿದೆ.

ಲಸಿಕಾಕರಣಕ್ಕೆ ಯು-ವಿನ್‌:

ಗರ್ಭಿಣಿಯರು ಹಾಗೂ ನವಜಾತ ಶಿಶುಗಳ ಲಸಿಕಾಕರಣ ಪ್ರಕ್ರಿಯೆಯನ್ನು ಡಿಜಿಟಲೀಕಣಗೊಳಿಸುವ ಯು-ವಿನ್‌ ಪೋರ್ಟಲ್‌ ಅನ್ನು ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಈ ಮೂಲಕ ಗರ್ಭಿಣಿಯರು ಹಾಗೂ ಮಕ್ಕಳು (ಜನನದಿಂದ 16 ವರ್ಷದವರೆಗೆ) ಜೀವರಕ್ಷಕ ಲಸಿಕೆಗಳನ್ನು ಸಕಾಲದಲ್ಲಿ ಪಡೆಯಲು ನೆರವಾಗಲಿದೆ.

ಮತ್ತೊಂದೆಡೆ, ಆರೋಗ್ಯ ವೃತ್ತಿಪರರು ಹಾಗೂ ಆ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳಿಗಾಗಿ ಪೋರ್ಟಲ್‌ವೊಂದನ್ನು ಉದ್ಘಾಟಿಸಿದ್ದಾರೆ. ದೇಶದಲ್ಲಿರುವ ಆರೋಗ್ಯ ವೃತ್ತಿಪರರು ಹಾಗೂ ಸಂಸ್ಥೆಗಳ ಕೇಂದ್ರೀಯ ದತ್ತಾಂಶ ಕೇಂದ್ರವಾಗಿ ಈ ವೆಬ್‌ಸೈಟ್‌ ಕಾರ್ಯನಿರ್ವಹಿಸಲಿದೆ.

ಆಯುಷ್ಮಾನ್‌ ಭಾರತ ಜಾರಿ ಮಾಡದ ದಿಲ್ಲಿ, ಬಂಗಾಳಕ್ಕೆ ಪ್ರಧಾನಿ ಮೋದಿ ತರಾಟೆ

ನವದೆಹಲಿ: ಆಯುಷ್ಮಾನ್‌ ಭಾರತ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸದ ದೆಹಲಿ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ಹಿತಾಸಕ್ತಿಯ ಕಾರಣಕ್ಕೆ ಎರಡೂ ರಾಜ್ಯ ಸರ್ಕಾರಗಳು ಯೋಜನೆಯನ್ನು ಜಾರಿಗೊಳಿಸುತ್ತಿಲ್ಲ. ಇದರಿಂದಾಗಿ ಎರಡೂ ರಾಜ್ಯಗಳ ವಯೋವೃದ್ಧರಿಗೆ ನಾವು ಸೇವೆ ಮಾಡಲು ಆಗುತ್ತಿಲ್ಲ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ. ನಿಮ್ಮ ನೋವು ನನಗೆ ಅರ್ಥವಾಗುತ್ತಿದೆ. ಆದರೆ ಸಹಾಯ ಮಾಡಲು ಆಗುತ್ತಿಲ್ಲ ಎಂದು ಹೇಳಿದರು.

51000 ಜನರಿಗೆ ಮೋದಿ ಉದ್ಯೋಗ ಪ್ರಮಾಣ ಪತ್ರ

ನವದೆಹಲಿ: ದೇಶದ ಯುವಕರಿಗೆ ಉದ್ಯೋಗ ಒದಗಿಸಲು ತಮ್ಮ ಸರ್ಕಾರ ಬದ್ಧ ಎಂದು ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಇದಕ್ಕಾಗಿ ವ್ಯವಸ್ಥೆಯನ್ನು ಸೃಷ್ಟಿಸಲು ಶ್ರಮಿಸುತ್ತಿರುವುದಾಗಿ ಹೇಳಿದ್ದಾರೆ.

ರೋಜ್‌ಗಾರ್‌ ಮೇಳದಲ್ಲಿ ಪಾಳ್ಗೊಂಡು 51,000ಕ್ಕೂ ಅಧಿಕ ಜನರಿಗೆ ಸರ್ಕಾರಿ ನೌಕರಿಯ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಮೋದಿ, ‘ಆಧುನಿಕ ತಂತ್ರಜ್ಞಾನದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಮನೋಭಾವ ಬಹಳ ಕೇಡುಂಟುಮಾಡಿದೆ. ಆದರೆ ನಮ್ಮ ಸರ್ಕಾರ ಹೊಸ ತಂತ್ರಜ್ಞಾನ ಹಾಗೂ ಆಧುನಿಕ ಕ್ಷೇತ್ರಗಳಾದ ಭಾಹ್ಯಾಕಾಶ, ಸೆಮಿಕಂಡಕ್ಟರ್‌ ಬಲವರ್ಧನೆಗೆ ಶ್ರಮಿಸುತ್ತಿದೆ’ ಎಂದರು.

‘ಎಕ್ಸ್‌ಪ್ರೆಸ್‌ ಮಾರ್ಗ, ಹೆದ್ದಾರಿ, ಬಂದರು, ರೈಲು ಸಂಪರ್ಕ, ವಿಮಾನ ನಿಲ್ದಾಣಗಳು ಸೇರಿದಂತೆ ವಿವಿಧ ಮೂಲಸೌಲರ್ಯಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ನೀರು ಹಾಗೂ ಗ್ಯಾಸ್‌ ವಿತರಣೆಗೆ ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. ಹೊಸ ಶಾಲೆ ಹಾಗೂ ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿದೆ. ಭಾರತದ ಯುವಕರ ವಲಸೆ, ಉದ್ಯೋಗಕ್ಕೆ ಅನುಕೂಲವಾಗುವಂತೆ 21 ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಮೋದಿ ಹೇಳಿದರು.