ಚುನಾವಣೆ ಭರಾಟೆ: ಖಾಸಗಿ ವಿಮಾನ, ಕಾಪ್ಟರ್‌ಗೆ ಭರ್ಜರಿ ಡಿಮಾಂಡ್‌

| Published : Mar 12 2024, 02:05 AM IST

ಚುನಾವಣೆ ಭರಾಟೆ: ಖಾಸಗಿ ವಿಮಾನ, ಕಾಪ್ಟರ್‌ಗೆ ಭರ್ಜರಿ ಡಿಮಾಂಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯಗಳನ್ನು ಆರಂಭಿಸುತ್ತಿದೆ.

ನವದೆಹಲಿ: ಲೋಕಸಭೆ ಚುನಾವಣೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯಗಳನ್ನು ಆರಂಭಿಸುತ್ತಿದೆ. ಇದಕ್ಕಾಗಿ ಒಂದೇ ದಿನದಲ್ಲಿ ಹಲವು ಸ್ಥಳಗಳಲ್ಲಿ ಪ್ರಚಾರ ಕಾರ್ಯ ನಡೆಸಲು ರಾಜಕೀಯ ಪಕ್ಷಗಳು ಬಾಡಿಗೆ ವಿಮಾನ ಹಾಗೂ ಹೆಲಿಕಾಪ್ಟರ್‌ ಮೊರೆ ಹೋಗಲಿವೆ. ಹೀಗಾಗಿ ಖಾಸಗಿ ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ಬೇಡಿಕೆ ಶೇ.40ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ಖಾಸಗಿ ವಿಮಾನಗಳ ಬಾಡಿಗೆ ದರ ಗಂಟೆಗೆ 4.5 ಲಕ್ಷ ರು.ನಿಂದ 5.25 ಲಕ್ಷ ರು. ಇರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.ಈ ಕುರಿತು ಮಾತನಾಡಿರುವ ಬಿಸಿನೆಸ್‌ ವಿಮಾನ ಅಸೋಸಿಯೇಷನ್‌ ಕಾರ್ಯನಿರ್ವಹಕ ನಿರ್ದೇಶಕ ಆರ್‌.ಕೆ ಬಾಲಿ, ‘ಈ ಬಾರಿ ಹಿಂದಿನ ಚುನಾವಣೆಗಿಂತಲೂ ಅಧಿಕ ಪ್ರಮಾಣದಲ್ಲಿ ಖಾಸಗಿ ವಿಮಾನಗಳಿಗೆ ಬೇಡಿಕೆ ಬಂದಿದೆ. ರಾಜಕೀಯ ಪಕ್ಷಗಳು ಸಣ್ಣ ವಿಮಾನಗಳಿಗಿಂತಲೂ, ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಇಟ್ಟಿವೆ. ಕೆಲವರು ಲೀಸ್‌ ಆಧಾರದ ಮೇಲೆ ವಿಮಾನಗಳನ್ನು ಪಡೆಯಲಿದ್ದಾರೆ. ಇದರಿಂದಾಗಿ ವಿಮಾನಗಳ ಬಾಡಿಗೆ ಬೆಲೆ ಗಂಟೆಗೆ 4.5 ಲಕ್ಷ ರು.ನಿಂದ 5.25 ಲಕ್ಷ ರು.ಗೆ ಏರಿಕೆಯಾಗಲಿದೆ. ಹೆಲಿಕಾಪ್ಟರ್‌ ಬೆಲೆ ಗಂಟೆಗೆ ಸುಮಾರು 1.5 ಲಕ್ಷ ರು,ನಷ್ಟು ಇರಲಿದೆ. ಕೆಲವೊಮ್ಮೆ ಬೇಡಿಕೆ ಹೆಚ್ಚಿದರೆ ಗಂಟೆಗೆ 3.5 ಲಕ್ಷ ರು. ಕೂಡ ಆಗಬಹುದು’ ಎಂದು ತಿಳಿಸಿದರು. ದೇಶದಲ್ಲಿ ಪ್ರಸ್ತುತ 112 ಖಾಸಗಿ ವಿಮಾನ ಆಪರೇಟರ್‌ಗಳಿದ್ದು, ಅವರ ಬಳಿ 450ರಿಂದ 500 ವಿಮಾನಗಳಿವೆ. ಅಂದಾಜು 175 ಹೆಲಿಕಾಪ್ಟರ್‌ಗಳಿವೆ. ಬೇಡಿಕೆ ಹೆಚ್ಚಿರುವ ಕಾರಣ ಕೆಲವರು ವಿದೇಶಗಳಿಂದ ಬಾಡಿಗೆ ತರಿಸಿ, ಇಲ್ಲಿ ಬೇಡಿಕೆ ಪೂರೈಸುತ್ತಾರೆ ಎಂದು ಮಾಹಿತಿ ನೀಡಿದರು.

ಖಾಸಗಿ ವಿಮಾನಗಳಲ್ಲಿ ಸುಮಾರು 10 ಜನ ಕೂರುವ ವ್ಯವಸ್ಥೆ ಇರುತ್ತದೆ. ಹೆಲಿಕಾಪ್ಟರ್‌ನಲ್ಲಿ 4-5 ಜನ ಕೂರಬಹುದು.2019ರಲ್ಲಿ ವಿಮಾನಗಳ ಮೇಲೆ ಬಿಜೆಪಿ 250 ಕೋಟಿ ರು. ಬಳಕೆ:

2019ರ ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಚುನಾವಣೆ ಪ್ರಚಾರದ ಕಾರ್ಯಕ್ಕೆಂದೇ ವಿಮಾನ ಹಾಗೂ ಹೆಲಿಕಾಪ್ಟರ್‌ ಬಾಡಿಗೆ ಪಡೆಯಲು ಒಟ್ಟು 250 ಕೋಟಿ ರು. ವೆಚ್ಚ ಮಾಡಿತ್ತು ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿತ್ತು.