ರಸ್ತೆ, ಫುಟ್ಪಾತ್‌ ಮೇಲೆ ದೇಗುಲ, ದರ್ಗಾ ಇರುವಂತಿಲ್ಲ: ‘ಸುಪ್ರೀಂ’

| Published : Oct 02 2024, 01:05 AM IST

ರಸ್ತೆ, ಫುಟ್ಪಾತ್‌ ಮೇಲೆ ದೇಗುಲ, ದರ್ಗಾ ಇರುವಂತಿಲ್ಲ: ‘ಸುಪ್ರೀಂ’
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ, ಜಲಮೂಲ ಅಥವಾ ರೈಲ್ವೆ ಹಳಿಯ ಬಳಿ ಯಾವುದೇ ರೀತಿಯ ಒತ್ತುವರಿ ಇರಬಾರದು

ನವದೆಹಲಿ: ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ, ಜಲಮೂಲ ಅಥವಾ ರೈಲ್ವೆ ಹಳಿಯ ಬಳಿ ಯಾವುದೇ ರೀತಿಯ ಒತ್ತುವರಿ ಇರಬಾರದು. ಯಾವುದೇ ಧಾರ್ಮಿಕ ಸಂಸ್ಥೆ ಅದನ್ನು ಒತ್ತುವರಿ ಮಾಡಿಕೊಂಡಿದ್ದರೂ ತೆರವು ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.ಭಾರತ ಜಾತ್ಯತೀತ ದೇಶ. ಹೀಗಾಗಿ ಇಂತಹ ಒತ್ತುವರಿಗಳನ್ನು ತೆರವುಗೊಳಿಸುವ ಸಂಬಂಧ ನೀಡುವ ಆದೇಶ ಯಾವುದೇ ಧರ್ಮ ಎಂದು ಪ್ರತ್ಯೇಕಿಸದೆ ಎಲ್ಲ ನಾಗರಿಕರಿಗೂ ಅನ್ವಯವಾಗುತ್ತದೆ. ರಸ್ತೆ ಮಧ್ಯೆ ಯಾವುದೇ ಧಾರ್ಮಿಕ ಕಟ್ಟಡ ಇರಬಾರದು. ಅದು ಗುರುದ್ವಾರ ಅಥವಾ ದರ್ಗಾ ಅಥವಾ ದೇಗುಲವೇ ಆಗಿರಬಹುದು. ಅದು ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಮಾಡಕೂಡದು. ಜನರ ಸುರಕ್ಷತೆಯೇ ಪರಮಶ್ರೇಷ್ಠ. ಹೀಗಾಗಿ ಈ ಒತ್ತುವರಿ ತೆರವು ಸಂಬಂಧ ಮಾರ್ಗಸೂಚಿ ಹೊರಡಿಸುವುದಾಗಿ ತಿಳಿಸಿದೆ.ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮನೆಗಳನ್ನು ಕೆಡವಲು ಕೆಲವು ರಾಜ್ಯ ಸರ್ಕಾರಗಳು ‘ಬುಲ್ಡೋಜರ್‌ ನ್ಯಾಯ’ದ ಮೊರೆ ಹೋಗಿವೆ ಎಂಬ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ। ಬಿ.ಆರ್‌. ಗವಾಯಿ ಹಾಗೂ ನ್ಯಾ। ಕೆ.ವಿ. ವಿಶ್ವನಾಥನ್‌ ಅವರ ಪೀಠ ತೀರ್ಪು ಕಾದಿರಿಸಿದೆ.ಇದಕ್ಕೂ ಮುನ್ನ ವಿಚಾರಣೆ ವೇಳೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಪ್ರಶ್ನಿಸಿದ ನ್ಯಾಯಪೀಠ, ಬುಲ್ಡೋಜರ್‌ ಕಾರ್ಯಾಚರಣೆ ಎದುರಿಸಲು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗುವುದು ಆಧಾರವೇ ಎಂದು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ, ಮೆಹ್ತಾ, ಇಲ್ಲವೇ ಇಲ್ಲ ಎಂದರು. ವಿಚಾರಣೆಯ ಒಂದು ಹಂತದಲ್ಲಿ ಬುಲ್ಡೋಜರ್‌ ಕ್ರಮವನ್ನು ತೀರಾ ಅಪರೂಪವಾಗಿ ಬಳಸಲಾಗಿದೆ ಎಂದರು. ಅದಕ್ಕೆ ತೀಕ್ಷ್ಣ ಉತ್ತರ ನೀಡಿದ ನ್ಯಾಯಪೀಠ, ಒಂದೋ ಎರಡೋ ವ್ಯಕ್ತಿಗಳ ವಿರುದ್ಧ ಅಲ್ಲ. 4.45 ಲಕ್ಷ ಪ್ರಕರಣಗಳಲ್ಲಿ ಎಂದು ಬಿಸಿಮುಟ್ಟಿಸಿತು.