ಸಾರಾಂಶ
ನವದೆಹಲಿ : ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು 2024ರ ಲೋಕಸಭೆ ಚುನಾವಣೆ ಬಳಿಕ ಎನ್‌ಡಿಎ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಆಗಲು ಇಚ್ಛಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಗುರುವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ವೇಳೆ ಮಾತನಾಡಿದ ಅವರು, ನಾಯ್ಡು ತಮ್ಮ 16 ಜನ ಸಂಸದರ ಬೆಂಬಲವನ್ನು ಎನ್‌ಡಿಎಗೆ ಕೊಟ್ಟು ಕೂಟದ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಪಟ್ಟ ಬಯಸಿದ್ದರು. ಆದರೆ ಸರ್ಕಾರ ಹೇಗೆ ನಡೆಸಬೇಕು ಎಂದು ತಿಳಿದಿದ್ದ ಪ್ರಧಾನಿ ಮೋದಿ ಅವರು ಇದಕ್ಕೆ ಒಪ್ಪಿರಲಿಲ್ಲ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಕೇಂದ್ರ ಸಚಿವ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಈ ರೀತಿ ಯಾವುದೇ ಮಾತುಕತೆಯೂ ನಡೆದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಬಳಿಕ ತಮ್ಮ ಮಾತು ಮುಂದುವರಿಸಿದ ಮಾಜಿ ಪ್ರಧಾನಿ, ಯುಪಿಎ ಅವಧಿಯಲ್ಲಿ ಪ್ರಧಾನಿ ಪಟ್ಟದ ಜೊತೆ ಅಧ್ಯಕ್ಷ, ಉಪಾಧ್ಯಕ್ಷ ಇತ್ತು. ಆಡಳಿತದ ಶಕ್ತಿ ಕೇಂದ್ರವು ಅಧ್ಯಕ್ಷರ ಬಳಿ ಇತ್ತು. ಆದರೆ ಮೋದಿ ಅವರು ಇದಕ್ಕೆ ಆಸ್ಪದ ಕೊಡದೆ, ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಲು ಯಾರನ್ನು ಬಿಡಲಿಲ್ಲ ಎಂದರು.