ಚುನಾವಣಾ ಲಾಭಕ್ಕೆ ನಾನು ಕೆಲಸ ಮಾಡಲ್ಲ: ಮೋದಿ

| Published : Mar 13 2024, 02:08 AM IST

ಸಾರಾಂಶ

ನಮ್ಮ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿರುವುದು ದೇಶ ಕಟ್ಟುವ ನಮ್ಮ ಅಭಿಯಾನದ ಭಾಗವಾಗಿಯೇ ಹೊರತೂ ಕೆಲವರು ಗ್ರಹಿಸಿರುವಂತೆ ಚುನಾವಣೆ ಗೆಲ್ಲಲು ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಹಮದಾಬಾದ್‌: ‘ನಮ್ಮ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿರುವುದು ದೇಶ ಕಟ್ಟುವ ನಮ್ಮ ಅಭಿಯಾನದ ಭಾಗವಾಗಿಯೇ ಹೊರತೂ ಕೆಲವರು ಗ್ರಹಿಸಿರುವಂತೆ ಚುನಾವಣೆ ಗೆಲ್ಲಲು ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಸಾಬರಮತಿ ಪ್ರದೇಶದಲ್ಲಿ ಮೋದಿ ಏಕಕಾಲಕ್ಕೆ ದೇಶದ 10 ವಂದೇಭಾರತ್ ರೈಲುಗಳಿಗೆ ಚಾಲನೆ ನೀಡಿದರು ಹಾಗೂ ದೇಶದ ವಿವಿಧ ಭಾಗಗಳ 1.06 ಲಕ್ಷ ಕೋಟಿ ರು.ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿ. ‘ಕೆಲವರು ನಮ್ಮ ಕೆಲಸಗಳನ್ನು ಚುನಾವಣೆಯ ದೃಷ್ಟಿಕೋನದಲ್ಲಿ ನೋಡುತ್ತಾರೆ. ಆದರೆ ನಾನು ನಿಮಗೊಂದು ವಿಷಯ ಹೇಳಲು ಬಯಸುತ್ತೇನೆ, ನಾವು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ದೇಶಕಟ್ಟುವ ಅಭಿಯಾನದ ಭಾಗವೇ ಹೊರತೂ ಸರ್ಕಾರ ರಚನೆಗಲ್ಲ. ಹಿಂದಿನ ತಲೆಮಾರು ಅನುಭವಿಸಿದಂತೆ ಈಗಿನ ಯುವಸಮೂಹ ಸಮಸ್ಯೆ ಎದುರಿಸಬಾರದು ಎಂಬುದು ನಮ್ಮ ಉದ್ದೇಶ. ಅದುವೇ ಮೋದಿ ಗ್ಯಾರಂಟಿ’ ಎಂದು ಮೋದಿ ಹೇಳಿದರು.

ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರ ರೈಲ್ವೆ ವಲಯದಲ್ಲಿ ಈ ಹಿಂದೆ ಮಾಡಲಾದ ವೆಚ್ಚಕ್ಕಿಂತ 6 ಪಟ್ಟು ಹೆಚ್ಚು ಹಣ ವೆಚ್ಚ ಮಾಡಿದೆ. 2024ರ ಮೊದಲ 2 ತಿಂಗಳಲ್ಲೇ ನಮ್ಮ ಸರ್ಕಾರ 11 ಲಕ್ಷ ಕೋಟಿ ರು.ಮೌಲ್ಯದ ಯೋಜನೆಗಳಿಗೆ ಚಾಲನೆ/ ಶಂಕುಸ್ಥಾಪನೆ ನೆರವೇರಿಸಿದೆ. ಹಿಂದಿನ ಸರ್ಕಾರಗಳ ರಾಜಕೀಯ ನಿಲುವುಗಳಿಂದಾಗಿ ಸ್ವಾತಂತ್ರ್ಯಾನಂತರದಲ್ಲಿ ದೇಶದಲ್ಲಿ ರೈಲ್ವೆ ವಲಯ ಆದ್ಯತೆ ಪಡೆದುಕೊಂಡಿರಲಿಲ್ಲ. ಹಿಂದೆಲ್ಲಾ ರೈಲ್ವೆ ಸಚಿವರು ಹೊಸ ನಿಲುಗಡೆ ಘೋಷಿಸಿದಾಗ, ಬೋಗಿಗಳ ಸಂಖ್ಯೆ ಹೆಚ್ಚಿಸಿದ್ಆಗ ಸದಸ್ಯರು ಚಪ್ಪಾಳೆ ತಟ್ಟುತ್ತಿದ್ದರು. 21ನೇ ಶತಮಾನದಲ್ಲೂ ನಾವು ಇಂಥ ಮನಸ್ಥಿತಿ ಉಳಿದುಕೊಂಡರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದ ಮೋದಿ, ಈ ಕಾರಣಕ್ಕಾಗಿ ನಾವು ರೈಲ್ವೆ ಬಜೆಟ್‌ ಅನ್ನು ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಳಿಸಿ ಅವುಗಳ ಯೋಜನೆಗೆ ಸದಾ ಹಣಕಾಸಿನ ನೆರವು ಸಿಗುವಂತೆ ನೋಡಿಕೊಂಡೆವು ಎಂದು ಹೇಳಿದರು.

ಹಿಂದೆಲ್ಲಾ ರೈಲುಗಳ ಆಗಮನ, ನಿರ್ಗಮನ ವಿಳಂಬ ಸಾಮಾನ್ಯವಾಗಿತ್ತು, ಟಿಕೆಟ್‌ ಖರೀದಿಗೆ ದಲ್ಲಾಳಿಗಳಿಗೆ ಕಮಿಷನ್‌ ನೀಡಬೇಕಿತ್ತು. ನಿಲ್ದಾಣಗಳಲ್ಲಿ ಉದ್ದದ ಸರದಿ ನಿಲ್ಲಬೇಕಿತ್ತು, ಮುಂಗಡ ಕಾಯ್ದಿರಿಸಲು ಸಾಕಷ್ಟು ಸಮಯ ಕಾಯಬೇಕಿತ್ತು. ಇದೆಲ್ಲಾ ನನಗೆ ಚೆನ್ನಾಗಿ ಗೊತ್ತು ಏಕೆಂದರೆ ನಾನು ನನ್ನ ಜೀವನ ಆರಂಭಿಸಿದ್ದೇ ರೈಲ್ವೆ ಹಳಿಗಳ ಮೇಲೆ ಎಂದು ಮೋದಿ ಹೇಳಿದರು.

ಕಾರ್ಯಕ್ರಮದಲ್ಲಿ ಮೋದಿ 10 ವಂದೇ ಭಾರತ್‌ ರೈಲು, ಸರಕು ಕಾರಿಡಾರ್‌ನ ಕಂಟ್ರೋಲ್‌ ರೂಂ, ಪೆಟ್ರೋಕೆಮಿಕಲ್‌ ಕಾಂಪ್ಲೆಕ್ಸ್‌ಗೆ ಚಾಲನೆ, ಶಂಕುಸ್ಥಾಪನೆ ನೆರವೇರಿಸಿದರು.